ಬೆಂಗಳೂರು : ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರೆಯಬೇಕಾದರೆ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಉಪ ಉತ್ಪನ್ನಗಳಿಂದ ಗಳಿಸುವ ಲಾಭದಲ್ಲೂ ರೈತರಿಗೆ ಪಾಲು ನೀಡಬೇಕು. ಕೇಂದ್ರ ಸರ್ಕಾರ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) ಪ್ರತಿ ಟನ್ಗೆ 4.5 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಶಾಸಕರ ಭವನದ ಸಭಾಂಗಣದಲ್ಲಿ ಕಬ್ಬು ಬೆಳೆಗಾರರ ಸಂಘ ಮತ್ತು ರೈತ ಸಂಘಗಳ ಒಕ್ಕೂಟ ಏರ್ಪಡಿಸಿದ್ದ ಕಬ್ಬು ಬೆಳೆಗಾರರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಬೆಳಗಾವಿಯಲ್ಲಿ ನಡೆದ ಕಬ್ಬು ಬೆಳೆಗಾರರ ಚಳವಳಿ ದೇಶದ ಗಮನ ಸೆಳೆದಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಬೆಲೆ ನಿಗದಿಪಡಿಸುವಲ್ಲಿ ಹಿನ್ನಡೆಯಾಯಿತು. ಬಳಿಕ ಮುಧೋಳದಲ್ಲಿ ನಡೆದ ಹೋರಾಟದಿಂದ ಬೆಲೆ ಹೆಚ್ಚಳಕ್ಕೆ ಒತ್ತಡ ಸೃಷ್ಟಿಸಲು ಸಾಧ್ಯವಾಯಿತು. ವಿಜಯಪುರ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಬ್ಬಿನ ಬೆಲೆ ಬೇರೆಬೇರೆಯಾಗಿದೆ. ಮೈಸೂರು, ಮಂಡ್ಯ ಭಾಗದಲ್ಲೂ ಹೋರಾಟ ನಡೆಸಿದರೂ ಸರ್ಕಾರದಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಸಮನ್ವಯ ಸಮಿತಿ ಮುಂದಿನ ದಿನಗಳಲ್ಲಿ ಮತ್ತೊಂದು ಹೋರಾಟ ರೂಪಿಸಲು ಚಿಂತನೆ ನಡೆಸಿವೆ. ಹರಿಯಾಣ, ಪಂಜಾಬ್, ತಮಿಳುನಾಡು, ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕಬ್ಬಿಗೆ ಕರ್ನಾಟಕಕ್ಕಿಂತ ಹೆಚ್ಚಿನ ಬೆಲೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಸುಮಾರು 82 ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳಿಗೆ ಅಗತ್ಯವಿರುವ ಕಬ್ಬಿನ ಪ್ರಮಾಣಕ್ಕಿಂತ ಈ ವರ್ಷ ಉತ್ಪಾದನೆ ಅರ್ಧದಷ್ಟು ಕಡಿಮೆಯಾಗಿದೆ. ಇದರಿಂದ ಕಾರ್ಖಾನೆಗಳ ನಡುವೆ ಕಬ್ಬು ಖರೀದಿಸಲು ಪೈಪೋಟಿ ಉಂಟಾಗಿದೆ. ಈ ಪರಿಸ್ಥಿತಿಯನ್ನು ರೈತರು ಅರ್ಥಮಾಡಿಕೊಂಡು ವಾಸ್ತವಾಂಶಗಳ ಆಧಾರದಲ್ಲಿ ಹೋರಾಟ ರೂಪಿಸಬೇಕು ಎಂದು ಕುರಬೂರು ಸಲಹೆ ನೀಡಿದರು.
ವಿಚಾರ ಸಂಕಿರಣದಲ್ಲಿ ಮಹಾರಾಷ್ಟ್ರದ ಪ್ರಗತಿಪರ ಕಬ್ಬು ಬೆಳಗಾರ ಸಂಜೀವ್ ಮಾನೆ, ಭಾರತ ಕಿಸಾನ್ ಸಂಘದ ದಿನೇಶ್, ರೈತಮುಖಂಡರಾದ ಯುಪಿಯ ರಾಜವೀರ್ ಸಿಂಗ್, ತಮಿಳುನಾಡಿನ ರಾಮ ಗೌಂಡರ್, ಪಾಂಡ್ಯನ್, ಪಂಜಾಬ್ನ ಅಭಿಮನ್ಯು ಕೋರಾ, ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಡಾ. ಪ್ರಕಾಶ್ ಕಮ್ಮರಡಿ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು.
ರಾಜ್ಯ ಸರ್ಕಾರದ ನಿಲುವಿಗೆ ಆಕ್ರೋಶ
ರಾಜ್ಯ ಸರ್ಕಾರ ಎಫ್ಆರ್ಪಿ ನಿಗದಿಪಡಿಸಲು ಸಾಧ್ಯವಿಲ್ಲ ಎಂಬ ನಿಲುವಿನಲ್ಲಿದ್ದು, ಮುಖ್ಯಮಂತ್ರಿಗಳು ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಸರಿಯಲ್ಲ. ಕಬ್ಬಿನಿಂದ ಸಕ್ಕರೆ ಮಾತ್ರವಲ್ಲದೆ ಎಥೆನಾಲ್, ಮೊಲಾಸಿಸ್ ಮತ್ತಿತರ ಉಪ ಉತ್ಪನ್ನಗಳು ದೊರೆಯುತ್ತವೆ. ಕಾರ್ಖಾನೆಗಳಿಗೆ ದೊರೆಯುವ ಉಪಉತ್ಪನ್ನಗಳ ಲಾಭವನ್ನೂ ಪರಿಗಣಿಸಿ ರೈತರಿಗೆ ಸೂಕ್ತ ಪಾಲು ನೀಡಬೇಕು.
ರಂಗರಾಜನ್ ಸಮಿತಿ ಶಿಫಾರಸಿನಂತೆ ಸಕ್ಕರೆ ಕಾರ್ಖಾನೆಗಳ ಲಾಭದಲ್ಲಿ ರೈತರಿಗೆ ಪಾಲು ನೀಡುವ ವ್ಯವಸ್ಥೆ ಜಾರಿಯಾಗಬೇಕು. ಹಿಂದೆ ಕಾರ್ಖಾನೆಗಳ ಉತ್ಪಾದನೆ ಮತ್ತು ಉಪ ಉತ್ಪನ್ನಗಳ ಬಳಕೆಯ ಮೇಲೆ ನಿಗಾ ವಹಿಸಲು ಅಬಕಾರಿ ಅಧಿಕಾರಿಗಳ ವ್ಯವಸ್ಥೆ ಇತ್ತು. ಅದನ್ನು ಪುನಃ ಜಾರಿಗೆ ತಂದು ಕಾರ್ಖಾನೆಗಳ ಚಟುವಟಿಕೆಗಳನ್ನು ಪರಿಶೀಲಿಸಬೇಕೆಂಬ ಒತ್ತಾಯ, ವಿಚಾರ ಸಂಕಿರಣದಲ್ಲಿ ಕೇಳಿಬಂತು.