ಬೆಳಗಾವಿ: ದಿ ಉಗಾರ ಶುಗರ್ ವರ್ಕ್ಸ್ ಉದ್ಯಮ ಸಮೂಹದ ಮಾಜಿ ಚೇರ್ಮನ್ ಹಾಗೂ ಡೆಕ್ಕನ್ ಶುಗರ್ ಟೆಕ್ನಾಲಜಿಸ್ಟ್ ಅಸೊಸೀಯೇಷನ್‌ನ ಮಾಜಿ ಅಧ್ಯಕ್ಷ, ಸಕ್ಕರೆ ಉದ್ಯಮಿ ರಾಜಾಭಾವು ಶಿರಗಾಂವಕರ್(91) ಗುರುವಾರ ಕೊಲ್ಲಾಪುರದ ನಿವಾಸದಲ್ಲಿ ನಿಧನರಾದರು. ಮೃತರಿಗೆ ಪುತ್ರ, ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಕಾಗವಾಡ ತಾಲೂಕಿನ ಉಗಾರದಲ್ಲಿ ಸಂಜೆ ನೆರವೇರಿತು.
ರಾಜಾಭಾವು ಲಂಡನ್ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. (ಆನರ್ಸ್), ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಎಸ್ಸಿ. ಪದವಿ ಪಡೆದಿದ್ದರು. ಉಗಾರ್ ಶುಗರ್ ವರ್ಕ್ಸ್ ಲಿಮಿಟೆಡ್ ಸಂಸ್ಥೆಯ ಡಿಸ್ಟಿಲರಿ ಮತ್ತು ಐಎಂಎಲ್ ವಿಭಾಗಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದರು.
ಡೆಕ್ಕನ್ ಶುಗರ್ ಟೆಕ್ನಾಲಜಿಸ್ಟ್ ಅಸೋಸಿಯೇಷನ್, ಆಲ್ ಇಂಡಿಯಾ ಡಿಸ್ಟಿಲರ್ಸ್ ಅಸೋಸಿಯೇಷನ್ ಮತ್ತು ಇಂಡಿಯನ್ ಶುಗರ್ ಎಕ್ಸಿಮ್ ಕಾರ್ಪೋರೇಷನ್ ಆಫ್ ಇಂಡಿಯಾ ಸಂಸ್ಥೆಗೆ ಅಧ್ಯಕ್ಷ, ಉಗಾರ್ ಕನ್ಸಲ್ಟನ್ಸಿ, ಮತ್ತು ದಿ ಎಸ್.ಬಿ.ರಿಸೇಲರ್ಸ್ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾಗಿದ್ದರು. ಉಗಾರ ಲಯನ್ ಕ್ಲಬ್ ಮತ್ತು ಸಾಂಗ್ಲಿಯ ನೂತನ ಬುದ್ಧಿಬಲ ಸಂಸ್ಥೆಯ ಸಂಸ್ಥಾಪಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.
ರಾಜಾಭಾವು ಅಂತಾರಾಷ್ಟ್ರೀಯ ಖ್ಯಾತಿಯ ಮಸಾಜ್ ತಜ್ಞ ಭೋಸಲೆಯವರ ಮರಾಠಿ ಆತ್ಮಚರಿತ್ರೆಯನ್ನು ಇಂಗ್ಲಿಷ್‌ಗೆ ಅನುವಾದಿಸಿ, ಪ್ರಕಟಿಸಿದ್ದರು. ಉಗಾರ ಪಟ್ಟಣದಲ್ಲಿ ಶಾಲೆಯ ಕಟ್ಟಡ ನಿರ್ಮಾಣ, ವಿಠ್ಠಲ ಮಂದಿರ ನಿರ್ಮಾಣ, ಜೈನ ಶಾಲೆಯ ಕಟ್ಟಡ ನಿರ್ಮಾಣ ಹೀಗೆ ಅನೇಕ ಕಾರ್ಯಗಳಿಗೆ ಉಗಾರ್ ಶುಗರ್ ಮೂಲಕ ಸಹಾಯಕ್ಕೆ ನಿಂತಿದ್ದರು.
ಲಯನ್ಸ್ ಕ್ಲಬ್ ಸ್ಥಾಪನೆ: ಉಗಾರ ಪಟ್ಟಣಕ್ಕೆ ತಕ್ಕಂತೆ ಸೇವಾ ಸಂಸ್ಥೆ ಇರಲಿಲ್ಲ. ರೈತರು ಮತ್ತು ಉದ್ಯಮಿಗಳನ್ನು ಒಂದುಗೂಡಿಸುವ ಒಂದು ವೇದಿಕೆಯ ಅಗತ್ಯ ಅರಿತು ಲಯನ್ಸ್ ಕ್ಲಬ್ಗೆ ಅನುಮತಿ ಪಡೆದರು. 1997ರ ಮಾರ್ಚ್ 2ರಂದು ಉಗಾರ ಲಯನ್ಸ್ ಕ್ಲಬ್ ಪ್ರಾರಂಭವಾಯಿತು. ಇದಕ್ಕೆ ಇವರೇ ಸಂಸ್ಥಾಪಕರು. ಆರಂಭಗೊಂಡ ಒಂದೇ ತಿಂಗಳಿನಲ್ಲಿ (ಏ.4) ಲಯನ್ಸ್ ಇಂಟರ್‌ನ್ಯಾಷನಲ್‌ದಿಂದ ಅಧಿಕೃತ ಮಾನ್ಯತೆ ಲಭಿಸಿತ್ತು. ಅಂದಿನಿಂದ ಅವರು ಲಯನ್ಸ್ ಕ್ಲಬ್ ಮೂಲಕ ಆರಂಭಿಸಿರುವ ಸೇವಾ ಕಾರ್ಯ ಇಂದಿಗೂ ನಿಂತಿಲ್ಲ.
ಪ್ರತಿ ತಿಂಗಳು ಡಾ.ಶಿರಗಾಂವಕರ್ ಆರೋಗ್ಯ ಮಂದಿರದಲ್ಲಿ ಲಯನ್ಸ್ ಕ್ಲಬ್ ಮಿರಜ್ ಮೂಲಕ ಉಚಿತವಾಗಿ ನೇತ್ರ ತಪಾಸಣೆ ಶಿಬಿರ ಆಯೋಜಿಸುತ್ತ ಬರಲಾಗಿದೆ. ಕಬ್ಬು ಕಟಾವಿಗೆ ವಿವಿಧ ರಾಜ್ಯಗಳಿಂದ ಬರುವ ಕಾರ್ಮಿಕರ ಮಕ್ಕಳಿಗಾಗಿ ಶಾಲಾ ಸೌಲಭ್ಯ ಕಲ್ಪಿಸಲು ‘ಸಕ್ಕರೆ ಶಾಲೆ’ ಹೆಸರಿನಲ್ಲಿ ಶಿಕ್ಷಣ ಕೊಡಿಸಿದರು. ಹಲವು ಗ್ರಾಮಗಳಲ್ಲಿ ಬಸ್ ತಂಗುದಾಣ ನಿರ್ಮಾಣ, ನೈಸರ್ಗಿಕ ವಿಕೋಪಗಳು, ಕಾರ್ಗಿಲ್ ಯುದ್ಧ, ಭೂಕಂಪ, ಪ್ರವಾಹ ಪರಿಸ್ಥಿತಿಗಳಲ್ಲಿ ಲಯನ್ಸ್ ಕ್ಲಬ್ ಸಹಾಯ ಹಸ್ತ ಚಾಚಿದ ಹಿಂದೆ ರಾಜಾಭಾವು ಪರಿಶ್ರಮ ಅಪಾರವಾಗಿತ್ತು.