ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸುದೀಪ್ ಹಂಚಿಕೊಂಡಿರುವ ಈ ಪತ್ರದಲ್ಲಿ, ಚಿತ್ರರಂಗದ ಆರಂಭಿಕ ದಿನಗಳಿಂದ ಇಂದಿನವರೆಗೆ ತಮಗೆ ಬೆನ್ನೆಲುಬಾಗಿ ನಿಂತವರನ್ನು ಸ್ಮರಿಸಿದ್ದಾರೆ.
ಈ ಅದ್ಭುತ ಹಾಗೂ ವರ್ಣರಂಜಿತ ಚಿತ್ರರಂಗದಲ್ಲಿ ಮೂರು ದಶಕಗಳನ್ನು ಪೂರೈಸಿ ಇಂದು ಇಲ್ಲಿ ನಿಂತಿರುವಾಗ ನನ್ನ ಹೃದಯ ತುಂಬಿ ಬಂದಿದೆ. ಕನಸುಗಳು, ಅನುಮಾನಗಳು ಮತ್ತು ಅಪಾರ ನಿರೀಕ್ಷೆಗಳೊಂದಿಗೆ ಪಯಣ ಆರಂಭಿಸಿದ ಆ ಹುಡುಗನಿಂದ ಹಿಡಿದು, ಇಂದು ನಾನೇನಾಗಿದ್ದೇನೋ ಇದೆಲ್ಲವೂ ನಾನು ಊಹಿಸಿದ್ದಕ್ಕಿಂತಲೂ ಮಿಗಿಲಾದುದು. ಇದಕ್ಕೆಲ್ಲ ಕಾರಣ ನೀವು.
ಅಭಿಮಾನಿಗಳೇ ನೀವು ನನ್ನ ಶಕ್ತಿ, ನನ್ನ ಇಂಧನ ಮತ್ತು ನಾನು ಪ್ರತಿದಿನ ಕೆಲಸಕ್ಕೆ ಬರಲು ಪ್ರೇರಣೆ. ನಿರ್ದೇಶಕರು ಮತ್ತು ಬರಹಗಾರರೇ ನಿಮ್ಮ ಕಥೆಗಳ ಮೇಲೆ ನನ್ನನ್ನು ನಂಬಿದ್ದಕ್ಕಾಗಿ, ನನ್ನನ್ನು ಹುರಿದುಂಬಿಸಿ, ಸವಾಲು ನೀಡಿ, ನಾನು ಇನ್ನೂ ಹೆಚ್ಚಿನದನ್ನು ಸಾಧಿಸಬಲ್ಲೆ ಎಂದು ನಂಬಿದ್ದಕ್ಕಾಗಿ ಧನ್ಯವಾದಗಳು. ನಿರ್ಮಾಪಕರೇ ನಿಮ್ಮ ಧೈರ್ಯ ಮತ್ತು ನಂಬಿಕೆ ನನ್ನ ಕನಸುಗಳನ್ನು ನನಸಾಗಿಸಿದೆ.
ಸಿನಿಮಾ ಎನ್ನುವುದು ಪರಿಶುದ್ಧವಾದ ಕೆಲಸ. ಲೈಟ್ ಬಾಯ್ಸ್‌ನಿಂದ ಹಿಡಿದು ಛಾಯಾಗ್ರಾಹಕರವರೆಗೆ, ಕಲಾ ತಂಡದಿಂದ ಹಿಡಿದು ವಸ್ತ್ರವಿನ್ಯಾಸಕರವರೆಗೆ, ಸ್ಪಾಟ್ ಬಾಯ್ಸ್‌ನಿಂದ ಹಿಡಿದು ಸಂಕಲನಕಾರರವರೆಗೆ ತೆರೆಯ ಹಿಂದೆ ಹರಿಯುವ ನಿಮ್ಮ ಪ್ರತಿಯೊಂದು ಹನಿ ಬೆವರೂ ಅತ್ಯಂತ ಅಮೂಲ್ಯವಾದುದು.
ನೀವು ನನ್ನ ಧ್ವನಿಯನ್ನು ಜನರಿಗೆ ತಲುಪಿಸಿದ್ದೀರಿ, ನನ್ನನ್ನು ಪ್ರಶ್ನಿಸಿದ್ದೀರಿ, ನನ್ನ ಸಾಧನೆಯನ್ನು ಸಂಭ್ರಮಿಸಿದ್ದೀರಿ ಮತ್ತು ನಾನು ಬೆಳೆಯಲು ಸಹಾಯ ಮಾಡಿದ್ದೀರಿ. ಕನ್ನಡ ಚಿತ್ರರಂಗದ ಒಕ್ಕೂಟ..ನೀವು ನನಗೆ ಗುರುತು, ಹೆಮ್ಮೆ ಮತ್ತು ಮನೆಯನ್ನು ನೀಡಿದ್ದೀರಿ. ನಾನು ಯಾವಾಗಲೂ ಕನ್ನಡ ಸಿನಿಮಾವನ್ನು ನನ್ನ ಹೃದಯದಲ್ಲಿ ಹೊತ್ತು ಸಾಗುತ್ತೇನೆ. ಈ ಎಲ್ಲಾ ಏಳುಬೀಳುಗಳ ನಡುವೆಯೂ ನನ್ನನ್ನು ಸಾಮಾನ್ಯ ಮನುಷ್ಯನನ್ನಾಗಿ, ವಾಸ್ತವದಲ್ಲಿ ನೆಲೆಯೂರುವಂತೆ ಮಾಡಿದ್ದಕ್ಕಾಗಿ ವಂದನೆಗಳು.
ಈ 30 ವರ್ಷಗಳು ನನಗೆ ಒಂದು ಪಾಠವನ್ನು ಕಲಿಸಿಕೊಟ್ಟಿದ್ದರೆ ಅದು 'ವಿನಯ': ಪ್ರತಿಯೊಂದು ಯಶಸ್ಸೂ ನಾವು ಎರವಲು ಪಡೆದದ್ದು. ನಾನು ಇನ್ನೂ ಕಠಿಣವಾಗಿ ಶ್ರಮಿಸುತ್ತೇನೆ, ಈ ಕಲೆಗೆ ಗೌರವ ತರುತ್ತೇನೆ ಮತ್ತು ಸಿನಿಮಾ ನನಗೆ ನೀಡಿದ್ದನ್ನೆಲ್ಲವನ್ನೂ ಮರಳಿ ನೀಡುತ್ತೇನೆ ಎಂದು ಭರವಸೆ ನೀಡುತ್ತೇನೆ. ಕೈಮುಗಿದು, ಕೃತಜ್ಞತೆ ತುಂಬಿದ ಹೃದಯದಿಂದ ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಬರೆದಿದ್ದಾರೆ.
ಕಿಚ್ಚನ ಈ ಸಾಧನೆಗೆ ಚಿತ್ರರಂಗದ ಗಣ್ಯರು ಹಾಗೂ ಕೋಟ್ಯಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.