ಬಾರ್ಸಿಲೋನಾದಿಂದ ರೋಬಾಟಿಕ್ ನಿಯತ್ರಿಂತ ಯಶಸ್ವಿ ಹೃದಯ ಶಸ ಚಿಕಿತ್ಸೆ ನಡೆಸಿದ ಡಾ. ಸುಧೀರ್ ಶ್ರೀವಾಸ್ತವ.  
ರಾಜ್ಯ

ಬಾರ್ಸಿಲೋನಾದಿಂದ ಯಶಸ್ವಿ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ

ಬಡ ಮಹಿಳೆಗೆ ಮುದ್ದೇನಹಳ್ಳಿಯಲ್ಲಿ ಉಚಿತ ಚಿಕಿತ್ಸೆ

ಚಿಕ್ಕಬಳ್ಳಾಪುರ : ಸ್ಪೇನ್‌ನ ಬಾರ್ಸಿಲೋನಾದಲ್ಲಿ ಕುಳಿತು ವೈದ್ಯರೊಬ್ಬರು 12 ಸಾವಿರ ಕಿ.ಮೀ. ದೂರದಲ್ಲಿರುವ ಕರ್ನಾಟಕದ ಮುದ್ದೇನಹಳ್ಳಿಯ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ರೋಬಾಟಿಕ್ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಮುದ್ದೇನಹಳ್ಳಿಯ ಶ್ರೀಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು (ಎಸ್‌ಎಂಎಸ್‌ಐಎಂಎಸ್‌ಆರ್) ಈ ದಾಖಲೆಯ ಶಸ್ತ್ರಚಿಕಿತ್ಸೆಗೆ ಸಾಕ್ಷಿಯಾಯಿತು. ಭಾರತೀಯ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಸುಧೀರ್ ಶ್ರೀವಾಸ್ತವ ಅವರು ಬಾರ್ಸಿಲೋನಾದಲ್ಲಿ ನಡೆದ ಯುರೋಪಿಯನ್ ಅಸೋಸಿಯೇಷನ್ ಫಾರ್ ಕಾರ್ಡಿಯೋ-ಥೊರಾಸಿಕ್ ಸರ್ಜರಿ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ವೇಳೆ ಈ ರೋಬೋಟ್ ನಿಯಂತ್ರಿತ ಶಸ್ತ್ರಚಿಕಿತ್ಸೆ ನಡೆಸಿದರು.

ಕೋಲಾರ ಜಿಲ್ಲೆಯ 26 ವರ್ಷದ ಮಹಿಳೆ ಹೃದಯದ ಮೇಲಿನ ಎರಡು ಕವಾಟಗಳ ನಡುವೆ ಜನ್ಮತಃ ರಂಧ್ರವಿರುವ ಸಮಸ್ಯೆಯಿಂದ ಬಳಲುತ್ತಿದ್ದರು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಆಟ್ರಿಯಲ್ ಸೆಪ್ಟಲ್ ಡಿಫೆಕ್ಟ್ ಎನ್ನಲಾಗುತ್ತದೆ. ಈ ಸಮಸ್ಯೆಗೆ ರೋಬೋಟಿಕ್ ತಂತ್ರಜ್ಞಾನದ ನೆರವಿನಿಂದ ಚಿಕಿತ್ಸೆ ನೀಡಲಾಯಿತು.

ಬಾರ್ಸಿಲೋನಾದಲ್ಲಿ ಅಳವಡಿಸಲಾಗಿದ್ದ ರೋಬೋಟಿಕ್ ಶಸ್ತ್ರಚಿಕಿತ್ಸಾ ಕನ್ಸೋಲ್ ಮೂಲಕ ಡಾ. ಸುಧೀರ್ ಮುದ್ದೇನಹಳ್ಳಿಯ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿದ್ದ ಎಸ್‌ಎಸ್‌ಐ ಮಂತ್ರ ರೋಬಾಟಿಕ್ ವ್ಯವಸ್ಥೆಯನ್ನು ನಿಯಂತ್ರಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಯಿತು.

ಮಣಿಪಾಲ್ ಆಸ್ಪತ್ರೆಯ ಜೈಪುರ ಘಟಕದ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ.ಲಲಿತ್ ಮಲಿಕ್, ಮುದ್ದೇನಹಳ್ಳಿಯ ಸಂಸ್ಥೆಯ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ. ಸಿ.ಎಸ್.ಹಿರೇಮಠ ಶಸ್ತ್ರಚಿಕಿತ್ಸೆಗೆ ಅಗತ್ಯ ನೆರವು ನೀಡಿದರು. ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ರೋಬಾಟಿಕ್ ಹೃದಯ ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡ ವೈದ್ಯರು ಮತ್ತು ಸಿಬ್ಬಂದಿಗಳು

ದೂರವನ್ನು ಮೀರಿದ ವೈದ್ಯಕೀಯ ತಂತ್ರಜ್ಞಾನ

ಈ ಹಿಂದೆ ಮುದ್ದೇನಹಳ್ಳಿಯ ಆಸ್ಪತ್ರೆಯಲ್ಲಿ ಗುರುಗ್ರಾಮ್‌ನಿಂದ ರೋಬಾಟಿಕ್ ವ್ಯವಸ್ಥೆಯನ್ನು ನಿಯಂತ್ರಿಸಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಸ್ಪೇನ್‌ನ ಬಾರ್ಸಿಲೋನಾದಿಂದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಈ ತಂತ್ರಜ್ಞಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳಸುವ ಸಾಧ್ಯತೆಯನ್ನು ಸಾಭೀತುಪಡಿಸಲಾಗಿದೆ. ವೈದ್ಯಕೀಯ ಶಿಕ್ಷಣ, ಶಸ್ತ್ರಚಿಕಿತ್ಸಾ ತರಬೇತಿ ಮತ್ತು ವಿವಿಧ ದೇಶಗಳ ತಜ್ಞ ವೈದ್ಯರ ಸಹಯೋಗಕ್ಕೂ ಇದು ಅವಕಾಶ ಕಲ್ಪಿಸುವ ಭರವಸೆ ಮೂಡಿಸಿದೆ.

ಬಡ ಮಹಿಳೆಗೆ ಉಚಿತ ಚಿಕಿತ್ಸೆ

ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಇಬ್ಬರು ಮಕ್ಕಳ ತಾಯಿ. ಅವರ ಪತಿ ಆಟೋರಿಕ್ಷಾ ಚಾಲಕರಾಗಿದ್ದು, ಕುಟುಂಬ ಆರ್ಥಿಕವಾಗಿ ಹಿಂದುಳಿದಿದೆ. ರೋಬಾಟಿಕ್‌ನಂತಹ ದುಬಾರಿ ಚಿಕಿತ್ಸೆಯನ್ನು ಎಸ್‌ಎಂಎಸ್‌ಐಎಂಎಸ್‌ಆರ್ ಸಂಪೂರ್ಣ ಉಚಿತವಾಗಿ ನೀಡಿದೆ.