Success through continuous effort
ಚಿಕ್ಕನಾಯಕನಹಳ್ಳಿ : ಅದೃಷ್ಟವನ್ನು ನಾವು ಹುಡುಕಿಕೊಂಡು ಹೋಗಬೇಕೇ ಹೊರತು, ಎಂದಿಗೂ ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ ಎಂದು ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀರಂಗಯ್ಯ ಹೇಳಿದರು.
ಪಟ್ಟಣದ ತೀ.ನಂ.ಶ್ರೀ ಸಭಾಂಗಣದಲ್ಲಿ ಎಸ್.ಬಿ.ಚಾರಿಟಬಲ್ ಟ್ರಸ್ಟ್, ಜ್ಞಾನಕಲ್ಪ ಸಿಇಟಿ, ನೀಟ್, ಜೆಇಇ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಯಾವುದೇ ಸೌಕರ್ಯವಿಲ್ಲದ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಮೆಲನಹಳ್ಳಿ ಗ್ರಾಮೀಣ ಪ್ರದೇಶದಿಂದ ಬಂದಂತವನು ನಾನು. ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ, ಜವಾಬ್ದಾರಿಯಿಂದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಶಾಸಕ ಸಿ.ಬಿ. ಸುರೇಶ್ ಬಾಬು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಲು ಈಗಿನಿಂದಲೇ ಶ್ರಮಿಸಬೇಕು ಎಂದರು. ತಹಸೀಲ್ದಾರ್ ಮಮತಾ ಮಾತನಾಡಿ, ಶ್ರಮ ಪಟ್ಟರೆ ಯಾವುದೂ ಅಸಾಧ್ಯವಲ್ಲ. ಒಂದು ಕುಟುಂಬ ಬದಲಾವಣೆಯಾಗಲು ಶಿಕ್ಷಣವೇ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸಿಇಟಿ ಕಮಿಟಿಯ ಸದಸ್ಯರಾದ ಅನು ಜ್ಯುವೆಲ್ಲರ್ ದೇವರಾಜು, ಜಿಪಂ ಮಾಜಿ ಸಮಸ್ಯ ರಾಮಚಂದ್ರಯ್ಯ, ಸದಸ್ಯೆ ಲೋಹಿತಬಾಯಿ ಮಾತನಾಡಿದರು. ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಾಗೂ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಲ್ಯಾಪ್ಟಾಪ್ ವಿತರಿಸಿದರು.
ಸಿಇಟಿ ತರಬೇತಿ ಶಿಬಿರದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸಾ.ಚಿ.ನಾಗೇಶ್, ಸದಸ್ಯರಾದ ತೀರ್ಥಪುರ ಕುಮಾರ್, ಉಮೇಶ್, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಗವಿರಂಗಯ್ಯ, ಸರ್ಕಾರಿ ನೌಕರರ ಸಂಘದ ಆರ್. ಪರಶಿವಮೂರ್ತಿ, ಎಚ್.ಎಂ. ಸುರೇಶ್ ಇದ್ದರು.