ಲಕ್ಷ ಲಕ್ಷ ಸಂಬಳದ ಕೆಲಸ ತೊರೆದು ಕೃಷಿಗೆ ಇಳಿದ ಸಾಹಸಿ: 10 ಬಾರಿ ದಿವಾಳಿ ಆದ್ರೂ 600 ಕೋಟಿ ಸಾಮ್ರಾಜ್ಯ ಕಟ್ಟಿದವನ ಯಶೋಗಾಥೆ! Success Story
- ಲಕ್ಷಾಂತರ ಸಂಬಳದ ಕಾರ್ಪೊರೇಟ್ ಉದ್ಯೋಗ ತೊರೆದು ಕೃಷಿಯಲ್ಲಿ ಯಶಸ್ಸು ಕಂಡ ಶಶಿ ಕುಮಾರ್
- ತಂದೆಯ ವಿರೋಧ ಹಾಗೂ ಹತ್ತು ಬಾರಿ ದಿವಾಳಿಯಾದರು ಛಲಬಿಡದೆ ಮುಂದುವರಿಸಿದ ಕೃಷಿ ಸಾಹಸ
- ಹೈನುಗಾರಿಕೆ ಹಾಗೂ ಸಾವಯವ ಕೃಷಿಯ ಮೂಲಕ ಅಕ್ಷಯಕಲ್ಪ ಸಂಸ್ಥೆ ಕಟ್ಟಿಬೆಳೆಸಿದ ನಾಯಕ
- ಪ್ರತಿ ರೈತ ಕುಟುಂಬಕ್ಕೆ ಮಾಸಿಕ ಲಕ್ಷಕ್ಕೂ ಅಧಿಕ ಆದಾಯ ತಂದುಕೊಡುತ್ತಿರುವ ಯಶಸ್ವಿ ಉದ್ಯಮ
Success Story : ಸುರಕ್ಷಿತವಾದ ಕಾರ್ಪೊರೇಟ್ ಉದ್ಯೋಗ, ಕೈತುಂಬಾ ಸಂಬಳ ಮತ್ತು ಅಮೆರಿಕದ ವಿಶ್ವವಿದ್ಯಾಲಯದ ಪ್ರತಿಷ್ಠಿತ ಪದವಿ... ಯಾವುದೇ ಯುವಕನಾಗಲಿ ಕನಸು ಕಾಣುವ ಇಂತಹ ಆರಾಮದಾಯಕ ಬದುಕನ್ನು ತೊರೆದು ಕೃಷಿ ಕ್ಷೇತ್ರಕ್ಕೆ ಕಾಲಿಡುವ ಧೈರ್ಯ ಯಾರಿಗೆ ತಾನೆ ಇರುತ್ತದೆ? ಆದರೆ, ಇಂತಹ ಧೈರ್ಯಕ್ಕೆ ಉದಾಹರಣೆಯಾಗಿದ್ದಾರೆ ಶಶಿ ಕುಮಾರ್. ವಿಪ್ರೊ ಸಂಸ್ಥೆಯಲ್ಲಿ 12 ವರ್ಷಗಳ ಕಾಲ ಲೀಡ್ ಆರ್ಕಿಟೆಕ್ಟ್ ಆಗಿ ಸೇವೆ ಸಲ್ಲಿಸಿ, ಲಕ್ಷಾಂತರ ರೂ. ಸಂಬಳದ ಉದ್ಯೋಗವನ್ನು ಬಿಟ್ಟು ಕೃಷಿಯೆಡೆಗೆ ಮರಳಿದ ಶಶಿ ಕುಮಾರ್ ಅವರ ಯಶೋಗಾಥೆ ನಿಜಕ್ಕೂ ಇಂದಿನ ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ, ಚಿಕಾಗೋದ ಇಲ್ಲಿನಾಯ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಶಶಿ ಕುಮಾರ್ ಅವರಿಗೆ ಕೃಷಿಯ ಮೇಲೆ ಸದಾ ಒಲವಿತ್ತು. 1991ರಲ್ಲಿ ಕಾಲೇಜು ದಿನಗಳಲ್ಲಿ ಉಡುಪಿ ಬಳಿ ಚೆರ್ಕಾಡಿ ರಾಮಚಂದ್ರ ರಾವ್ ಎಂಬ ಕೃಷಿಕರನ್ನು ಭೇಟಿಯಾದದ್ದು ಅವರ ಜೀವನದ ದೊಡ್ಡ ತಿರುವಾಗಿತ್ತು. ಕೇವಲ ಎರಡು ಎಕರೆಯಲ್ಲಿ ವಿವಿಧ ಬೆಳೆಗಳನ್ನು ಬೆಳೆದು, ಲಾಭದಾಯಕ ಕೃಷಿ ಮಾಡುವುದು ಹೇಗೆ ಎಂಬುದನ್ನು ರಾವ್ ಅವರಿಗೆ ತೋರಿಸಿಕೊಟ್ಟರು. 2010ರಲ್ಲಿ ಕಾರ್ಪೊರೇಟ್ ಜಗತ್ತನ್ನು ತೊರೆದಾಗ, 'ಯುವಕರಿಗೆ ಕೃಷಿ ಆರ್ಥಿಕವಾಗಿ ಲಾಭದಾಯಕ ವೃತ್ತಿಯಾಗಬಲ್ಲದೇ?' ಎಂಬ ಒಂದೇ ಒಂದು ಪ್ರಶ್ನೆ ಅವರ ಮನಸ್ಸಿನಲ್ಲಿತ್ತು.
ಜೀವನಪೂರ್ತಿ ಕೃಷಿಯನ್ನೇ ನಂಬಿದ್ದ ಸ್ವತಃ ಅವರ ತಂದೆಯವರೇ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದರು. ಇದು ಕುಟುಂಬದಲ್ಲಿ ದೊಡ್ಡ ಬಿರುಕು ಮೂಡಿಸಿತು. ಮಗನ ಈ ವಿಚಿತ್ರ ನಿರ್ಧಾರದಿಂದಾಗಿ ತಂದೆ ಬರೋಬ್ಬರಿ ಎಂಟು ವರ್ಷಗಳ ಕಾಲ ಅವರೊಂದಿಗೆ ಮಾತನಾಡಲೇ ಇಲ್ಲ. ಈ ಕಷ್ಟದ ಹಾದಿಯಲ್ಲಿ ವ್ಯವಹಾರವು ಸುಮಾರು ಹತ್ತು ಬಾರಿ ದಿವಾಳಿಯಂಚಿಗೆ ಬಂದಿತ್ತು. ಆದರೆ ಯಾವುದೇ ಬಿಕ್ಕಟ್ಟಿಗೆ ಎದೆಗುಂದದೆ, ತಮ್ಮ ಪತ್ನಿ ಶಿಲ್ಪಾ ತಮ್ಮ ಸ್ವಂತ ಉಳಿತಾಯದಿಂದ ನೀಡಿದ 30 ಲಕ್ಷ ರೂ. ಹಾಗೂ ಸಂಬಂಧಿಕರಾದ ಡಾ. ಮುನಿ ರೆಡ್ಡಿ ನೀಡಿದ 10 ಲಕ್ಷ ರೂ. ಸಹಾಯದಿಂದ ಕೃಷಿಯನ್ನು ಮುಂದುವರಿಸಿಕೊಂಡು ಹೋದರು.
ಋತುಮಾನದ ಬೆಳೆಗಳಿಂದ ಬರುವ ಅನಿಶ್ಚಿತ ಆದಾಯವನ್ನು ತಪ್ಪಿಸಲು, ರೈತರಿಗೆ ಸ್ಥಿರವಾದ ನಗದು ಹರಿವನ್ನು ಖಾತರಿಪಡಿಸುವ ಡೈರಿ (ಹೈನುಗಾರಿಕೆ) ಕ್ಷೇತ್ರದ ಮೂಲಕ ಶಶಿ ಕುಮಾರ್ 'ಅಕ್ಷಯಕಲ್ಪ ಆರ್ಗಾನಿಕ್' (Akshayakalpa Organic) ಸಂಸ್ಥೆಗೆ ಚಾಲನೆ ನೀಡಿದರು. ನಂತರ ಮಣ್ಣಿನ ನಿರ್ವಹಣೆ, ಜೇನುಸಾಕಣೆ, ಕೋಳಿಫಾರಂ, ಬಾಳೆ ಕೃಷಿ ಮತ್ತು ಸಾವಯವ ಗೊಬ್ಬರ ತಯಾರಿಕೆಗೆ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿ ರೈತರ ಆದಾಯವನ್ನು ವೈವಿಧ್ಯಗೊಳಿಸಿದರು. ಇಂದು 2,800 ಹಳ್ಳಿಗಳ ಸುಮಾರು 2,800 ರೈತರು ಅಕ್ಷಯಕಲ್ಪದ ಭಾಗವಾಗಿದ್ದಾರೆ. ಇವರಲ್ಲಿ 1,200 ಮಂದಿ ಮಹಿಳೆಯರಿದ್ದು, ಯುವ ರೈತರ ಸರಾಸರಿ ವಯಸ್ಸು ಕೇವಲ 32 ವರ್ಷಗಳಾಗಿರುವುದು ಕೃಷಿ ಕ್ಷೇತ್ರದಲ್ಲಿ ಹೊಸ ಅಲೆಯ ಸಂಕೇತವಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ ಅಕ್ಷಯಕಲ್ಪ ಸಂಸ್ಥೆಯು ಪ್ರತಿ ರೈತ ಕುಟುಂಬಕ್ಕೆ ಸರಾಸರಿ ತಿಂಗಳಿಗೆ 1.28 ಲಕ್ಷ ರೂಪಾಯಿ ಆದಾಯವನ್ನು ಖಾತರಿಪಡಿಸಲು ಯಶಸ್ವಿಯಾಗಿದೆ. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನ ಹೊರತಾಗಿ ಮುಂಬೈ ಮತ್ತು ಪುಣೆಯಂತಹ ಪ್ರಮುಖ ನಗರಗಳಿಗೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿರುವ ಈ ಸಾವಯವ ಉದ್ಯಮವು ಈಗ ಸುಮಾರು 600 ಕೋಟಿ ರೂ. ವಾರ್ಷಿಕ ಆದಾಯವನ್ನು ಗಳಿಸುತ್ತಿದೆ.
ದೂರದೃಷ್ಟಿ ಮತ್ತು ರಿಸ್ಕ್ ತೆಗೆದುಕೊಳ್ಳುವ ಛಲವಿದ್ದರೆ ಕೃಷಿಯನ್ನು ಕೇವಲ ಬದುಕಿನ ದಾರಿಯನ್ನಾಗಿ ಮಾತ್ರವಲ್ಲದೆ, ಕೋಟ್ಯಂತರ ರೂ. ಗಳ ಯಶೋಗಾಥೆಯನ್ನಾಗಿ ಬದಲಾಯಿಸಬಹುದು ಎಂಬುದನ್ನು ಶಶಿ ಕುಮಾರ್ ಜಗತ್ತಿಗೆ ಸಾಬೀತುಪಡಿಸಿದ್ದಾರೆ, (ಏಜೆನ್ಸೀಸ್).