ಕುಶಾಲನಗರ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ದಾನಿ ಹರಪಳ್ಳಿ ರವೀಂದ್ರ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಿದರು. ಟಿ.ಜಿ. ಪ್ರೇಮಕುಮಾರ್, ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಸುಜಾತಾ, ಗೀತಾ ರಮ್ಯಾ, ಸೌಮ್ಯಾ, ರೇಖಾ ಇತರರಿದ್ದರು. 
ರಾಜ್ಯ

ನಿರಂತರ ಅಭ್ಯಾಸದಿಂದ ಯಶಸ್ಸು ಸಾಧ್ಯ

ಕುಶಾಲನಗರ: ಕುಶಾಲನಗರ ತಾಲೂಕು ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ವತಿಯಿಂದ ಸೋಮವಾರ ‘ದಾನಿಗಳ ನಡಿಗೆ ಸರ್ಕಾರಿ ಶಾಲೆಯೆಡೆಗೆ’ ಎಂಬ ಸಮುದಾಯದ ಸಹಭಾಗಿತ್ವ ಕಾರ್ಯಕ್ರಮದಡಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಕ್ಕಳಿಗೆ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಿದರು.
ನಂತರ ಮಾತನಾಡಿದ ಹರಪಳ್ಳಿ ರವೀಂದ್ರ, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಕಠಿಣ ಪರಿಶ್ರಮ, ಸತತ ಪ್ರಯತ್ನ ನಿರಂತರ ಅಭ್ಯಾಸ ಮಾಡಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ.
ಸರ್ಕಾರಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ತಾವು ಪ್ರತಿ ವರ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ನೀಡುತ್ತಾ ಬಂದಿದ್ದೇನೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರ ತಂಡವಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಉತ್ತಮ ಕಲಿಕೆಯೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಂಡು ಪಾಲಕರು ಮತ್ತು ಸಮಾಜದ ಋಣವನ್ನು ತೀರಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ಶ್ರಮಿಸಬೇಕು ಎಂದರು.
ಸರ್ಕಾರಿ ಶಾಲೆಗಳ ಸಮುದಾಯ ಸಹಭಾಗಿತ್ವ ಯೋಜನೆಯ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಹಾಗೂ ಸಂಘ- ಸಂಸ್ಥೆಗಳು ಕೈಜೋಡಿಸಬೇಕು. ತಮ್ಮನ್ನು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ದಾನಿ ಹರಪಳ್ಳಿ ರವೀಂದ್ರ ತಮ್ಮ ದುಡಿಮೆಯ ಒಂದಷ್ಟು ಪಾಲನ್ನು ಸಹಾಯ ಹಸ್ತದಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಹಾಗೂ ಸಾಮಾಜಿಕ ಕಾರ್ಯಗಳಿಗೆ ನಿರಂತರವಾಗಿ ಸಹಾಯಹಸ್ತ ನೀಡುತ್ತಿರುವುದು ಶ್ಲಾಘನೀಯವಾದುದು ಎಂದು ಹೇಳಿದರು.
ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ. ದಯಾನಂದ ಪ್ರಕಾಶ್, ಬಿ.ಎನ್. ಸುಜಾತಾ, ಬಿ.ಡಿ. ರಮ್ಯಾ, ಎಸ್.ಎಂ.ಗೀತಾ ಬಿ.ಎಸ್.ಅನ್ಸಿಲಾ ರೇಖಾ ಇತರರಿದ್ದರು.