ಸೇಡಂನಲ್ಲಿ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವರ್ಗಾವಣೆಯಾಗಿರುವ ತಾಪಂ ಇಒ ಚನ್ನಪ್ಪ ರಾಯಣ್ಣವರ್ ದಂಪತಿಯನ್ನು ಸತ್ಕರಿಸಲಾಯಿತು. ನೂತನ ಇಒ ಸೈಯದ್ ಪಟೇಲ್, ಸೋಮಶೇಖರ, ರವಿಕುಮಾರರೆಡ್ಡಿ ಇದ್ದರು.
- ತಾಪಂ ಇಒ ರಾಯಣ್ಣವರ್ ಅನಿಸಿಕೆ
- ಆರ್ಡಿಪಿಆರ್ ಸಿಬ್ಬಂದಿಯಿಂದ ಸತ್ಕಾರ
ಸೇಡಂ: ಸರ್ಕಾರಿ ಯಂತ್ರದಲ್ಲಿ ಕೆಲಸ ಮಾಡುವ ನಾವು ಮೇಲಧಿಕಾರಿಗಳಾಗಿದ್ದರೂ ಸಹ ಇಲಾಖೆಯ ಎಲ್ಲರೂ ಸೇರಿ ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಜನರಿಗೆ ಯೋಜನೆಗಳನ್ನು ಮುಟ್ಟಿಸುವ ಮೂಲಕ ಯಶಸ್ವಿಯಾಗಿ ಇಲಾಖೆ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿದೆ ಎಂದು ವರ್ಗಾವಣೆಗೊಂಡ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚನ್ನಪ್ಪ ರಾಯಣ್ಣವರ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಮತ್ತು ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, 2010ರಲ್ಲಿ ಸೇಡಂ ತಾಲೂಕಿನ ಊಡಗಿ ಗ್ರಾಮ ಪಂಚಾಯಿತಿಗೆ ಪಿಡಿಒ ಆಗಿ ನೇಮಕವಾಗುವ ಮೂಲಕ ವೃತ್ತಿ ಜೀವನ ಆರಂಭಗೊಂಡಿತು. ಐದು ವರ್ಷ ನಂತರ ಬಡ್ತಿ ದೊರೆತಿದ್ದು, 2023ರಲ್ಲಿ ಸೇಡಂ ತಾಪಂ ಇಒ ಆಗಿ ಸಲ್ಲಿಸಿದ ಸೇವೆ ತೃಪ್ತಿ ನೀಡಿದೆ ಎಂದರು.
ನೂತನ ತಾಪಂ ಇಒ ಎಂ.ಡಿ. ಸೈಯದ್ ಪಟೇಲ್ ಮಾತನಾಡಿ, ಚನ್ನಪ್ಪ ಅವರು ಸರಳ, ಸಾತ್ವಿಕ ಮತ್ತು ಮೃದು ಸ್ವಭಾವದವರು. ಎಲ್ಲ ಸಮಸ್ಯೆಗಳನ್ನು ಸಂಯಮದಿಂದ ಬಗೆಹರಿಸುವ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಕ್ಷಮತೆ ಅವರಲ್ಲಿದೆ. ಅಂತಲೇ ಇಲ್ಲಿನ ಸಿಬ್ಬಂದಿ ಹಾಗೂ ಸಾರ್ವಜನಿಕರು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ ಎಂದು ಕೊಂಡಾಡಿದರು.
ತಾಪಂ ಸಿಬ್ಬಂದಿ ನಾಗಮ್ಮ, ಪಿಡಿಒ ಬಸವರಾಜಪ್ಪ ಅನಿಸಿಕೆ ವ್ಯಕ್ತಪಡಿಸಿದರು. ಅಧಿಕಾರಿಗಳಾದ ಸೋಮಶೇಖರ, ರವಿಕುಮಾರರೆಡ್ಡಿ ವೇದಿಕೆಯಲ್ಲಿದ್ದರು. ಪಿಡಿಒ ರಾಮಪ್ಪ ಸ್ವಾಗತಿಸಿದರು. ದೇವಿಂದ್ರ ನಾಯಕ್ ನಿರೂಪಣೆ ಮಾಡಿ ವಂದಿಸಿದರು.