Success is easy with constant effort.
ಬುಕ್ಕಾಪಟ್ಟಣ : ತಂದೆ&ತಾಯಿ, ಓದಿದ ಶಾಲೆ ಹಾಗೂ ವಿದ್ಯೆ ಕಲಿಸಿದ ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ ಎಂದು ಅನಿವಾಸಿ ಭಾರತೀಯ ನಿರಂಜನ್ ತಿಳಿಸಿದರು.
ಶಿರಾ ತಾಲೂಕು ಬುಕ್ಕಾಪಟ್ಟಣ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಒಸಾಟ್ ಸಂಸ್ಥೆ, ಗೋ ಟು ಟೆಕ್ನಾಲಜೀಸ್ ಇಂಡಿಯಾ ಪೆವೇಟ್ ಲಿಮಿಟೆಡ್, ಸ್ಯಾಕ್ರಮೆಂಟೊ (ಕೆಎಸ್ಎಸ್) ಕನ್ನಡ ಸಂಘ ಕಾರ್ಲೆ ಇನ್ಫಾಪೆವೇಟ್ ಲಿಮಿಟೆಡ್ ಬೆಂಗಳೂರು, ಹರ್ಮನ್ ಇನೈರ್ಡ್ ಚಾರ್ಲಿ ಟ್ರಸ್ಟ್ ಬೆಂಗಳೂರು ವತಿಯಿಂದ ನಿರ್ಮಿಸಲಾದ ನಾಲ್ಕು ಶಾಲಾ ಕಟ್ಟಡ ಉದ್ಘಾನಾ ಸಮಾರಂಭದಲ್ಲಿ ಶಾಲೆಗೆ ಪೀಠೋಪಕರಣಗಳನ್ನು ಹಸ್ತಾಂತರಿಸಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಕನಸುಗಳನ್ನು ಕಾಣಬೇಕು, ಆ ಕನಸುಗಳನ್ನು ನೆರವೇರಿಸಿಕೊಳ್ಳಲು ನಿರಂತರ ಪರಿಶ್ರಮ ಪಡುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಮಾದವರೆಡ್ಡಿ ಮಾತನಾಡಿ, ಸರ್ಕಾರ ಮಾಡಬೇಕಾದ ಕರ್ತವ್ಯವನ್ನು ಒಂದು ಸಂಸ್ಥೆ ಅಚ್ಚುಕಟ್ಟಾಗಿ ಮಾಡಿ ಮುಗಿಸಿದೆ. ಇವುಗಳ ಸೂಕ್ತ ನಿರ್ವಹಣೆ ಮೂಲಕ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶಿರಾ ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ಮಂಜುನಾಥ್ ಮಾತನಾಡಿ, ಬುಕ್ಕಾಪಟ್ಟಣದಲ್ಲಿ ಹುಟ್ಟಿ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ವಿದೇಶದಲ್ಲಿ ನೆಲೆಸಿರುವ ನಿರಂಜನ್ ಹಾಗೂ ದೀಪಾ ದಂಪತಿ ಸ್ವಗ್ರಾಮದ ಶಾಲೆಯ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದ್ದು, ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಬುಕ್ಕಾಪಟ್ಟಣ ವಿಎಸ್ಎಸ್ನ್ ನಿರ್ದೇಶಕ ಬಿ.ಆರ್.ಎಂ.ಸತ್ಯನಾರಾಯಣ ಮಾತನಾಡಿ, ಮನುಷ್ಯ ಹಣದಿಂದ ದೊಡ್ಡವನಾಗುವುದಿಲ್ಲ ತನ್ನ ಗುಣ ಸ್ವಭಾವ, ವಿಚಾರ ಹಾಗೂ ತನ್ನ ಸಾಧನೆಗಳಿಂದ ದೊಡ್ಡವನಾಗುತ್ತಾನೆ. ವಿದ್ಯಾರ್ಥಿಗಳು ಉನ್ನತ ಆಶಯಗಳನ್ನು ರೂಢಿಸಿಕೊಂಡು ಅವುಗಳ ಸಾಧನೆಗೆ ಪರಿಶ್ರಮ ಪಡುವಂತಾಗಬೇಕು ಎಂದರು. ಗ್ರಾಪಂ ಅಧ್ಯಕ್ಷ ಮುಜಾಹಿದ್, ಉಪಾಧ್ಯಕ್ಷೆ ಗಂಗಮ್ಮ, ಸದಸ್ಯರಾದ ದಿವಾಕರ್, ಕಾಂತರಾಜು, ನರಸಿಂಹಯ್ಯ, ಗಂಗರಾಜು, ನಾಗರತ್ನಮ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.