Success comes from studying with dedication and concentration. 
ರಾಜ್ಯ

ಶ್ರದ್ಧೆ, ಏಕಾಗ್ರತೆಯಿಂದ ಕಲಿತರೆ ಯಶಸ್ಸು

ತುಮಕೂರು ಡೆಸ್ಕ್
ಗುಬ್ಬಿ: ಇಪ್ಪತೆದು ವರ್ಷಗಳಲ್ಲಿ 13 ಸಾವಿರ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯು ಇಂಜಿನಿಯರಿಂಗ್​ ಶಿಕ್ಷಣ ನೀಡಿದ್ದು, ಅದರಲ್ಲಿ 4,500 ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆದಿರುವುದು ನನಗೆ ಹೆಚ್ಚಿನ ಖುಷಿ ನೀಡಿದೆ ಎಂದು ಮಾಜಿ ಸಂಸದರೂ ಆದ ಸಿಐಟಿ ಕಾಲೇಜಿನ ಅಧ್ಯಕ್ಷ ಜಿ.ಎಸ್​.ಬಸವರಾಜ್​ ಹೇಳಿದರು.
ಗುಬ್ಬಿಯ ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಿಐಟಿ ಕ್ಯಾಟ್​ ಉಚಿತ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು, ಅವರು ಸಹ ಉನ್ನತ ಶಿಕ್ಷಣ ಪಡೆಯಬೇಕು ಎಂಬ ಹಂಬಲದಿಂದ ನಾನು 25 ವರ್ಷಗಳ ಹಿಂದೆ ಈ ಕಾಲೇಜು ಆರಂಭಿಸಿದೆ. ಇಲ್ಲಿ ಓದಿರುವ ವಿದ್ಯಾರ್ಥಿಗಳು ಅಮೆರಿಕ, ರಷ್ಯಾ, ಜಪಾನ್​ನಂತಹ ದೇಶಗಳಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಿದಾಗ ಖುಷಿಯಾಗುತ್ತಿದೆ. ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಏಕಾಗ್ರತೆಯಿಂದ ಕಲಿತರೆ ಖಂಡಿತವಾಗಿ ಯಶಸ್ಸು ಲಭಿಸುತ್ತದೆ ಎಂದು ಹೇಳಿದರು.
ಸಿಐಟಿ ಕಾಲೇಜಿನ ಕಾರ್ಯದರ್ಶಿಯೂ ಆದ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಮಾತನಾಡಿ, ಸುಂದರ ವಾತಾವರಣದಲ್ಲಿ ನಿಮಾರ್ಣವಾಗಿರುವ ಈ ಸಂಸ್ಥೆಯು ಗುಣಮಟ್ಟದ ಶಿಕ್ಷಣ ಹಾಗೂ ಮುಂದಿನ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ನೀಡುವಂತ ಆಶಾದಾಯಕ ಕೆಲಸ ಮಾಡುತ್ತಿದೆ. ನಗರ ಪ್ರದೇಶಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಸಹ ಸಿಐಟಿ ಸಂಸ್ಥೆಯಲ್ಲಿ ನೀಡಲಾಗುತ್ತಿದೆ ಎಂದರು. ಸಿಐಟಿ ಕಾಲೇಜಿನ ನಿರ್ದೇಶಕ ಡಾ.ಡಿ.ಎಸ್​.ಸುರೇಶ್​ ಮಾತನಾಡಿ, ಪ್ರತಿವರ್ಷದಂತೆ ಸಿಐಟಿ ಕ್ಯಾಟ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆರ್ಥಿಕವಾಗಿ ಸಾಕಷ್ಟು ಹಿಂದುಳಿದಂತ 8ರಿಂದ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಇದುವರೆಗೂ 138 ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.