Vaishno Devi  
ರಾಜ್ಯ

ವೈಷ್ಣೋದೇವಿ ಯಾತ್ರೆಗೂ ಸಹಾಯಧನ

ಸವಿನಾ ನಾಯ್ಕ

ಪ್ರಮುಖ ಮುಖ್ಯಾಂಶಗಳು

  • ಯಾತ್ರೆ ಮುಗಿಸಿ ಬಂದವರು ದಾಖಲೆ ಕೊಟ್ಟರೆ ಸಿಗಲಿದೆ 5 ಸಾವಿರ ರೂಪಾಯಿ
ಬೆಂಗಳೂರು: ರಾಜ್ಯ ಸರ್ಕಾರ ಜಮ್ಮು-ಕಾಶ್ಮೀರದಲ್ಲಿರುವ ಪ್ರಸಿದ್ಧ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ಕರ್ನಾಟಕದ ಯಾತ್ರಾರ್ಥಿಗಳಿಗೆ ಸಹಾಯಧನ ನೀಡುವ ಯೋಜನೆ ಜಾರಿಗೆ ತರಲು ಸಜ್ಜಾಗುತ್ತಿದೆ. ಯೋಜನೆಯಡಿ, ಯಾತ್ರೆ ಮಾಡಿ ಬರುವ ಯಾತ್ರಾರ್ಥಿಗಳು ಅಗತ್ಯ ದಾಖಲೆ ಒದಗಿಸಿ ಕಾಶಿ ಯಾತ್ರೆ ಮಾದರಿಯಲ್ಲಿ 5 ಸಾವಿರ ರೂ. ಸಹಾಯಧನ ಪಡೆಯಬಹುದಾಗಿದೆ.
ಮುಜರಾಯಿ ಇಲಾಖೆ ಮಾರ್ಗಸೂಚಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಅನುಮತಿ ದೊರೆತ ಕೂಡಲೇ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರೆ ಸಂಬಂಧ ಕಳೆದ ವರ್ಷ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಧಾರ್ವಿುಕ ಪರಿಷತ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಅದರಂತೆ ರಾಜ್ಯ ಸರ್ಕಾರದಿಂದ ವೈಷ್ಣೋದೇವಿ ಯಾತ್ರೆ ಯೋಜನೆಗೆ ಅನುಮೋದನೆ ದೊರೆತಿದ್ದು, ಮಾರ್ಗಸೂಚಿ ಪರಿಶೀಲಿಸಿ ಅನುಮತಿ ನೀಡಬೇಕಿದೆ. ಯಾತ್ರಾರ್ಥಿಗಳು ಪ್ರಯಾಣದ ಟಿಕೆಟ್, ಜಿಪಿಎಸ್ ಫೋಟೋ, ವಯಸ್ಸಿನ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಪ್ರತಿ, ನೋಟರಿ ಮಾಡಿಸಿದ ಛಾಪಾ ಖಾಗದ ಸೇರಿ ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ಮೂಲಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಸಹಾಯಧನ ಸೌಲಭ್ಯ

ಮುಜರಾಯಿ ಇಲಾಖೆ ಮಾನಸ ಸರೋವರ ಯಾತ್ರೆ ಮಾಡಿದವರಿಗೆ 30 ಸಾವಿರ ರೂ. ಹಾಗೂ ಚಾರ್​ಧಾಮ್ (ಗಂಗೋತ್ರಿ, ಯಮುನೋತ್ರಿ, ಕೇದಾರ, ಬದರಿನಾಥ) ಯಾತ್ರೆ ಮಾಡಿದವರಿಗೆ 20 ಸಾವಿರ ರೂ. ಸಹಾಯಧನವನ್ನು ಬಹಳ ವರ್ಷಗಳಿಂದ ನೀಡುತ್ತಿದ್ದು ಕಾಶಿ ಯಾತ್ರೆ ಮಾಡಿ ಬಂದವರಿಗೆ 5 ಸಾವಿರ ರೂ. ಸಹಾಯಧನ ನೀಡುವ ಪರಿಪಾಠವನ್ನು ಆರಂಭಿಸಿದೆ. 2025ರಲ್ಲಿ ಕಾಶಿ ಯಾತ್ರೆ ಮಾಡಿದ 8,197 ಮಂದಿ, ಮಾನಸ ಸರೋವರ ಯಾತ್ರೆ ಮಾಡಿದ 812 ಮಂದಿ ಹಾಗೂ ಚಾರ್​ಧಾಮ್ ಯಾತ್ರೆ ಮಾಡಿದ 4,241 ಮಂದಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ವೈಷ್ಣೋದೇವಿ ಯಾತ್ರೆಗೂ ಈ ಸೌಲಭ್ಯ ದೊರೆಯಲಿದೆ.

ಷರತ್ತುಗಳು ಅನ್ವಯ

ಈ ಧಾರ್ವಿುಕ ಪ್ರವಾಸದ ಸಹಾಯ ಧನ ಪಡೆಯಲು ಫಲಾನುಭವಿಗಳು 18 ವರ್ಷ ಮೇಲ್ಪಟ್ಟವರಾಗಿ ರಬೇಕು, ಕರ್ನಾಟಕದ ಕಾಯಂ ನಿವಾಸಿ ಯಾಗಿರಬೇಕು. ಒಂದು ಯಾತ್ರೆಗೆ ಒಂದು ಬಾರಿ ಮಾತ್ರ ಸೌಲಭ್ಯ ಪಡೆಯಲು ಸಾಧ್ಯ. ಅದರಂತೆ ಈ ನಾಲ್ಕೂ ಯಾತ್ರೆಗಳಿಗೆ ತಲಾ ಒಂದು ಬಾರಿ ಸಹಾಯಧನ ಪಡೆಯ ಬಹುದಾಗಿದೆ.