High court 
ರಾಜ್ಯ

ಅಕ್ರಮ ಎಲ್​ಇಡಿ ಬೋರ್ಡ್​ ತೆರವು ವರದಿ ಸಲ್ಲಿಸಿ| High court

ಬೆಂಗಳೂರು: ನಗರದಲ್ಲಿ ಅಳವಡಿಸಲಾಗಿರುವ ಅನಧಿಕೃತ ಎಲ್​ಇಡಿ ಬೋರ್ಡ್​ಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಗ್ರೇಟರ್​ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹೈಕೋರ್ಟ್​ ನಿರ್ದೇಶನ ನೀಡಿದೆ. 
ಸ್ವಂತ ಉದ್ದೇಶಕ್ಕಾಗಿ ಅನುಮತಿ ಪಡೆದಿದ್ದ ಎಲ್​ಇಡಿ ಜಾಹಿರಾತು ಲಕಗಳನ್ನು ವಾಣಿಜ್ಯ ಜಾಹಿರಾತು ಲಕಗಳನ್ನಾಗಿ ಪರಿವರ್ತಿಸಲು ಒಂದು ಬಾರಿಯ ಅವಕಾಶವನ್ನು ನೀಡಿ ಆದೇಶ ಹೊರಡಿಸಿದ್ದ ಜಿಬಿಎ ಕ್ರಮವನ್ನು ಪ್ರಶ್ನಿಸಿ ಕೆ. ಲಕ್ಷ$್ಮಣ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್​)ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ. ಎಸ್​. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಸೂಚನೆ ನೀಡಿದೆ. 
ಅಕ್ರಮ ಬೋರ್ಡ್​ಗಳನ್ನು ಸಕ್ರಮಗೊಳಿಸುವ ಪ್ರಾಧಿಕಾರದ ಯಾವುದೇ ಪ್ರಕ್ರಿಯೆಯು ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿರುವ ಪೀಠವು, ಜಿಬಿಎಗೆ ಈ ಅರ್ಜಿಗೆ ಸಂಬಂಧಿಸಿದಂತೆ ವಿವರವಾದ ಪ್ರತಿಕ್ರಿಯೆ ದಾಖಲಿಸಲು ಸೂಚಿಸಿದೆ. ನಿಗದಿಪಡಿಸಿದ ಷರತ್ತುಗಳನ್ನು ಉಲ್ಲಂಘಿಸಿ, ವಾಣಿಜ್ಯ ಜಾಹೀರಾತುಗಳನ್ನು ಹಲವು ಪರದೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ನಗರದ ಅತ್ಯಂತ ಬ್ಯುಸಿ ಇರುವ ಟ್ರಾಫಿಕ್​ ಜಂಕ್ಷನ್​ಗಳಲ್ಲಿ ಜಾಹೀರಾತು ಎಲ್​ಇಡಿ ಬೋರ್ಡ್​ಗಳನ್ನು ಅಳವಡಿಸಲಾಗಿದೆ. ಕೆಲವು ಶಾಲೆಗಳೂ ಸಹ ಇವುಗಳನ್ನು ಅಳವಡಿಸಿ ವಾಣಿಜ್ಯ ಜಾಹೀರಾತುಗಳನ್ನು ಪ್ರದರ್ಶಿಸುತ್ತಿವೆ. ವಾಹನ ಚಾಲಕರು ರಸ್ತೆಯ ಗಮನ ಬಿಟ್ಟು ಎಲ್​ಇಡಿ ಬೋರ್ಡ್​ಗಳ ಕಡೆ ನೋಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಬಿಎ ಪರ ವಕೀಲರು ಪ್ರತಿಕ್ರಿಯಿಸಿ, ಈಗಾಗಲೇ ನೋಟಿಸ್​ಗಳನ್ನು ಜಾರಿಗೊಳಿಸಲಾಗಿದ್ದು, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಜು. 16ಕ್ಕೆ ನಿಗದಿಯಾಗಿದೆ.