ಬಸವಕಲ್ಯಾಣದ ಬಿಕೆಡಿಬಿ ಸಭಾ ಭವನದಲ್ಲಿ ಶ್ರೀ ಬಸವೇಶ್ವರ ಪದವಿ ಕಾಲೇಜು ಶನಿವಾರ ಆಯೋಜಿಸಿದ್ದ ವೈಜ್ಞಾನಿಕ ಚಿಂತನೆ ಕಾರ್ಯಕ್ರಮವನ್ನು ಡಾ ವಿವೇಕಾನಂದ ಸಜ್ಜನ್ ಉದ್ಘಾಟಿಸಿದರು. ಅನಿಲಕುಮಾರ ರಗಟೆ, ಮಲ್ಲಿಕಾರ್ಜುನ ಕುರಕೋಟೆ, ಅಶೋಕ ನಾಗರಾಳೆ, ಸುನಿಲಕುಮಾರ ರಾಯವಾಡೆ, ಪುಷ್ಪಾವತಿ ಮಾಮಾ, ಡಾ.ಭೀಮಾಶಂಕರ ಬಿರಾದಾರ, ಡಾ.ರುದ್ರಮಣಿ ಮಠಪತಿ, ಶಾಂತಲಾ ಪಾಟೀಲ ಇದ್ದರು.
- ಡಾ.ವಿವೇಕಾನಂದ ಸಜ್ಜನ್ ಅಭಿಮತ
- ಕಲ್ಯಾಣದಲ್ಲಿ ವೈಜ್ಞಾನಿಕ ಚಿಂತನೆ ಕಾರ್ಯಕ್ರಮ
ಬಸವಕಲ್ಯಾಣ: ಶಿಕ್ಷಣ ಅರಿವು ವಿಸ್ತರಿಸುವ ದಾರಿ. ಯಾವುದು ಸರಿ, ತಪ್ಪು ಎಂಬ ಆಲೋಚನೆ ಕಟ್ಟಿ ಕೊಡುತ್ತದೆ ಎಂದು ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿವೇಕಾನಂದ ಸಜ್ಜನ್ ಹೇಳಿದರು.
ನಗರದ ಬಿಕೆಡಿಬಿ ಸಭಾ ಭವನದಲ್ಲಿ ಶ್ರೀ ಬಸವೇಶ್ವರ ಪದವಿ ಕಾಲೇಜು ಶನಿವಾರ ಆಯೋಜಿಸಿದ್ದ ಅರಿವಿನ ಪಯಣ, ಸಾಹಿತ್ಯ ಮತ್ತು ವೈಜ್ಞಾನಿಕ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಧ್ಯಯನ ವ್ಯಾಪ್ತಿ ಹೆಚ್ಚಾಗಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ವೈಚಾರಿಕ ಮತ್ತು ವೈಚಾರಿಕ ಪರಂಪರೆಯ ನೆಲ ಕಲ್ಯಾಣ. ಬಸವಾದಿ ಶರಣರು ಪ್ರಜ್ಞಾಪೂರ್ವಕ ಸಮಾಜವನ್ನು ರೂಪಿಸಿದ್ದಾರೆ. ವಚನಗಳು ಹೊಸ ಆಲೋಚನೆಗಳು ಹುಟ್ಟಿಸಿದ ಸಾಹಿತ್ಯ. ಈ ಹೊಸ ಚಿಂತನೆಗಳು ಕಾಲದ ಅವಶ್ಯಕತೆಯೂ ಆಗಿವೆ. ಹೀಗಾಗಿ ವಿಜ್ಞಾನ ಓದಿನ ಜತೆಗೆ ವಚನಗಳ ಅಧ್ಯಯನವೂ ಅವಶ್ಯಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಈ ಕಾಲದ ಚಲನೆ ನಿರ್ಧರಿಸಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲ್ಲದೆ ಇಂದಿನ ಕಾಲ ಊಹಿಸಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಹೀಗಾಗಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿವೆ ಎಂದು ಹೇಳಿದರು.
ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಈ ಕಾಲದ ಅಗತ್ಯ. ಜತೆಗೆ ಮಾನವೀಯ ಮೌಲ್ಯಗಳು ಮುಖ್ಯ. ಯಂತ್ರಕ್ಕಿಂತ ಮನುಷ್ಯ ಬದುಕು ದೊಡ್ಡದು. ಕೃತಕ ಬುದ್ಧಿಮತ್ತೆ, ಗಣಕಯಂತ್ರ ಯೋಚಿಸುವ ಶಕ್ತಿ ಹೊಂದಿಲ್ಲ. ಮನುಷ್ಯ ಮಾತ್ರ ಆಲೋಚಿಸುವ, ವಿವೇಚಿಸುವ, ಅಳುವ, ನಗುವ, ಸಂವೇದನೆ ಹೊಂದಿದ್ದಾನೆ ಎಂದು ವಿಶ್ಲೇಷಿಸಿದರು.
ಬಸವಕಲ್ಯಾಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ.ಶ್ರೀಕಾಂತ ಚವ್ಹಾಣ್ ಮಾತನಾದರು.
ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹಕಾರ್ಯದರ್ಶಿ ಸುನಿಲಕುಮಾರ ರಾಯವಾಡೆ, ನಿರ್ದೇಶಕರಾದ ಬಸವರಾಜ ತೊಂಡಾರೆ, ಪುಷ್ಪಾವತಿ ಮಾಮಾ, ಬಸವೇಶ್ವರ ಪಿಯು ಕಾಲೇಜು ಪ್ರಾಚಾರ್ಯ ರುದ್ರಮಣಿ ಮಠಪತಿ, ಅಕ್ಕಮಹಾದೇವಿ ಕಾಲೇಜು ಪ್ರಾಚಾಯೆರ್ ಮಾಯಾ ಮುರಾಳೆ, ಬಸವೇಶ್ವರ ಪಿಜಿ ಪ್ರಾಚಾಯೆರ್ ಶಾಂತಲಾ ಪಾಟೀಲ ಇದ್ದರು. ಸಂಗೀತಾ ಮಹಾಗಾವೆ ಸ್ವಾಗತಿಸಿದರು. ಪವನ್ ಪಾಟೀಲ ವಂದಿಸಿದರು. ಬಸವರಾಜ ಖಂಡಾಳೆ ನಿರೂಪಣೆ ಮಾಡಿದರು.