ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಿಸಲಾಯಿತು. ಎ.ಮಂಜು, ಸೋಮಲಿಂಗೇಗೌಡ, ಬೊಮ್ಮಯ್ಯ ನಾಯ್ಕ ಇತರರಿದ್ದರು.
- ಶಾಸಕ ಎ.ಮಂಜು
- ಹಳ್ಳಿ ಮೈಸೂರು ಹೋಬಳಿಯ ಸೋಮನಹಳ್ಳಿ ಸರ್ಕಾರಿ ಪ್ರೌಢಶಾಲೆ
ಹೊಳೆನರಸೀಪುರ: ವಿದ್ಯಾರ್ಥಿಗಳು ಅವಕಾಶ ಬಳಸಿಕೊಂಡು ಪ್ರತಿಭಾವಂತರಾಗಿ ಹೊರಹೊಮ್ಮಬೇಕು ಎಂದು ಶಾಸಕ ಎ.ಮಂಜು ಸಲಹೆ ನೀಡಿದರು.
ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಸೋಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಬೈಸಿಕಲ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಮಕ್ಕಳಿಗೆ ಅವಕಾಶಗಳು ಅಧಿಕವಾಗಿದ್ದು, ಸೌಲಭ್ಯಗಳು ದೊರೆಯುತ್ತಿವೆ. ಇದರೊಂದಿಗೆ ಸರ್ಕಾರಗಳಿಂದ ಹಲವು ಸೌಲಭ್ಯಗಳೂ ಲಭ್ಯವಾಗುತ್ತಿವೆ. ಇವುಗಳ ಸದ್ಬಳಕೆ ಮಾಡಿಕೊಂಡುವಿದ್ಯಾವಂತರಾಗಬೇಕು ಎಂದು ತಿಳಿಸಿದರು.
ಸ್ವಂತ ಹಣದಲ್ಲಿ ದಾನಿಗಳು, ಮುಖ್ಯ ಶಿಕ್ಷಕ ಬೊಮ್ಮನಾಯ್ಕ ಹಾಗೂ ಸಹ ಶಿಕ್ಷಕ ತೀರ್ಥಪ್ಪ ಅವರ ಸಹಕಾರದಿಂದ 19 ವಿದ್ಯಾರ್ಥಿಗಳು ಬೈಸಿಕಲ್ ಮೂಲಕ ಶಾಲೆಗೆ ಬರಲು ಅನುಕೂಲವಾಗಿದೆ. ಶಾಲೆಗೆ ಸುಣ್ಣ-ಬಣ್ಣ, ರಿಪೇರಿ, ತಡೆಗೋಡೆ ಮಾಡಿಕೊಡಲಾಗುವುದು. ಇದರೊಂದಿಗೆ ಸೋಮನಹಳ್ಳಿ ಶಾಲೆಯನ್ನು ಕೆಪಿಎಸ್ ಶಾಲೆ ಮಾಡುವುದಾಗಿ ಘೋಷಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೊಮಾಲಿಂಗೇಗೌಡ ಮಾತನಾಡಿ, ಶಾಲೆಗೆ ಕಳೆದ ವರ್ಷ ಶೇ.100ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶಾಲಾ ದಾಖಲಾತಿ ಹೆಚ್ಚಿಸುವ ದೃಷ್ಟಿಯಿಂದ 8ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕರು ಉಚಿತ ಬೈಸಿಕಲ್ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಶಾಸಕರ ಉಪಸ್ಥಿತಿಯಲ್ಲಿ ವಿತರಣೆ ಮಾಡಿದ್ದು ಶ್ಲಾಘನೀಯ ಎಂದರು.
ಕಾಮಿಡಿ ಕಿಲಾಡಿ ತುಕಾಲಿ ಸಂತೋಷ್, ಮಾತನಾಡಿ, ಮುಂದಿನ ದಿನಗಳಲ್ಲಿ ಸೋಮನಹಳ್ಳಿ ಸರ್ಕಾರಿ ಶಾಲೆಯ ದಾಖಲಾತಿ ಹೆಚ್ಚಳಕ್ಕೆ ಸಹಾಯ ಮಾಡಲಾಗುವುದು. ಅಲ್ಲದೆ ಮುಖ್ಯ ಶಿಕ್ಷಕರ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದರು.