ಬೆಟ್ಟದಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. 
ರಾಜ್ಯ

ವಿದ್ಯಾರ್ಥಿಗಳು ಗುರು-ಹಿರಿಯರನ್ನು ಗೌರವಿಸಲಿ

ಪ್ರಮುಖ ಮುಖ್ಯಾಂಶಗಳು

  • ಬನಶಂಕರಿ ಮಹಿಳಾ ಸಮಾಜ ಹಾಗೂ ಲಕ್ಷ್ಮೀದೇವಿ ಸೇವಾ ಟ್ರಸ್ಟ್ ಅಧ್ಯಕ್ಷೆ ಎನ್.ಶಾಂತಾರಾಮಸ್ವಾಮಿ
  • ಸರ್ಕಾರಿ ಪ್ರೌಢಶಾಲೆ

ಬೆಟ್ಟದಪುರ:

ವಿದ್ಯಾರ್ಥಿಗಳು ಗುರು-ಹಿರಿಯರಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳುವುದರ ಜತೆಗೆ ಉತ್ತಮ ಸಂಸ್ಕಾರ ಹಾಗೂ ಸಾಮಾಜಿಕ ಕಾಳಜಿಯೊಂದಿಗೆ ಸಮಾಜಮುಖಿಯಾಗಿ ಬೆಳೆಯಬೇಕು ಎಂದು ಬನಶಂಕರಿ ಮಹಿಳಾ ಸಮಾಜ ಹಾಗೂ ಲಕ್ಷ್ಮೀದೇವಿ ಸೇವಾ ಟ್ರಸ್ಟ್ ಅಧ್ಯಕ್ಷೆ ಎನ್.ಶಾಂತಾರಾಮಸ್ವಾಮಿ ಹೇಳಿದರು.

ಬನಶಂಕರಿ ಮಹಿಳಾ ಸಮಾಜ, ಲಕ್ಷ್ಮೀದೇವಿ ಸೇವಾ ಟ್ರಸ್ಟ್ ಹಾಗೂ ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಉಚಿತ ನೋಟ್ ಪುಸ್ತಕ ಹಾಗೂ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಯಾವುದೇ ಕಾರಣಕ್ಕೂ ಪಾಲಕರನ್ನು ಅನಾಥಾಶ್ರಮಕ್ಕೆ ಬಿಡಬಾರದು. ನಾನೂ ಕೂಡ ಬಡ ಕುಟುಂಬದಿಂದ ಬಂದವನಾಗಿದ್ದು, ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚಿನ ಅಂಕಗಳಿಸುವ ಮೂಲಕ ಉನ್ನತ ಸ್ಥಾನ ಪಡೆದುಕೊಳ್ಳಬೇಕು ಎಂದರು.
ವಿದ್ಯಾರ್ಥಿ ಮಿತ್ರ ಓದಿ: ವಿಜಯವಾಣಿ ದಿನಪತ್ರಿಕೆ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ವಿದ್ಯಾರ್ಥಿ ಮಿತ್ರ ಸ್ಪರ್ಧಾತ್ಮಕ ಪರೀಕ್ಷೆ, ಸಾಮಾನ್ಯ ಜ್ಞಾನ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಒದಗಿಸಲಿದೆ. ವಿದ್ಯಾರ್ಥಿಗಳು ನಿತ್ಯ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಂಡು, ವಿದ್ಯಾರ್ಥಿ ಮಿತ್ರದ ಮಾಹಿತಿಯನ್ನು ಸದುಪಯೋಗಪಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರವಿಪ್ರಸನ್ನ, ವಿಜಯವಾಣಿ ದಿನಪತ್ರಿಕೆಯ ವಿದ್ಯಾರ್ಥಿ ಮಿತ್ರ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ನೆರವಾಗುವ ಮಹತ್ವದ ಶೈಕ್ಷಣಿಕ ಪ್ರಯತ್ನವಾಗಿದೆ. ಪುಸ್ತಕದ ಜತೆಗೆ ಪತ್ರಿಕೆ ಓದುವ ಅಭ್ಯಾಸವೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಇದರ ಪ್ರಯೋಜನ ಪಡೆದುಕೊಳ್ಳಬೇಕು. ದೂರದ ಬೆಂಗಳೂರಿಂದ ನಮ್ಮ ಬೆಟ್ಟದಪುರದ ಸರ್ಕಾರಿ ಪ್ರೌಢಶಾಲೆಗೆ ಸಹಕಾರ ನೀಡಿ, ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅನುಕೂಲ ಮಾಡಿಕೊಡುತ್ತಿರುವ ಬನಶಂಕರಿ ಮಹಿಳಾ ಸಮಾಜ ಮತ್ತು ಲಕ್ಷ್ಮೀದೇವಿ ಟ್ರಸ್ಟ್ ಕಾರ್ಯ ಅನನ್ಯ ಎಂದು ಹೇಳಿದರು.
ವಿಜಯವಾಣಿ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಆಸ್ತಿಯಾಗಿದ್ದಾರೆ. ನಿರಂತರ ಅಧ್ಯಯನ, ಶಿಸ್ತು ಹಾಗೂ ಪರಿಶ್ರಮದ ಮೂಲಕ ಉನ್ನತ ಗುರಿ ಸಾಧಿಸಲು ಪ್ರಯತ್ನಿಸಬೇಕು. ಉತ್ತಮ ಪುಸ್ತಕಗಳ ಜತೆಗೆ ಉತ್ತಮ ಪತ್ರಿಕೆಗಳ ಓದುವ ಅಭ್ಯಾಸ ಬೆಳೆಸಿಕೊಂಡರೆ ಜ್ಞಾನ ವಿಸ್ತಾರವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ದೊಡ್ಡ ಕನಸು ಕಾಣಬೇಕು ಮತ್ತು ಅದನ್ನು ಸಾಕಾರಗೊಳಿಸಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬನಶಂಕರಿ ಮಹಿಳಾ ಸಮಾಜ ಹಾಗೂ ಲಕ್ಷ್ಮೀದೇವಿ ಸೇವಾ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ, ಬ್ಯಾಗ್ ಮತ್ತು ವಾಟರ್ ಬಾಟಲಿಗಳನ್ನು ವಿತರಣೆ ಮಾಡಲಾಯಿತು. ನಂತರ ಗಣ್ಯರನ್ನು ಸನ್ಮಾನಿಸಲಾಯಿತು.
ಶಾಲೆ ಉಪಪ್ರಾಂಶುಪಾಲ ನಟರಾಜು, ಬನಶಂಕರಿ ಮಹಿಳಾ ಸಮಾಜ ಹಾಗೂ ಲಕ್ಷ್ಮೀದೇವಿ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ವರಲಕ್ಷ್ಮೀ ಪ್ರಸಾದ್, ರಂಗಲಕ್ಷ್ಮೀ ಸಿದ್ದರಾಜು, ಭಾನುಮತಿ ನಾರಾಯಣ, ಆಶಾ ಪುರುಷೋತ್ತಮ್, ಇಂದ್ರ ಸತೀಶ್, ಮನೋರಮಾ ರೆಡ್ಡಿ, ಸವಿತಾ, ನಾಗಮಣಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೈಲಾರಿ, ಶಿಕ್ಷಕರಾದ ಗೊರಹಳ್ಳಿ ಜಗದೀಶ್, ಆಲನಹಳ್ಳಿ ಕೆಂಪರಾಜು, ನಿಂಗರಾಜು, ಮೋಹನ್‌ಕುಮಾರ್, ಸತೀಶ್‌ಕುಮಾರ್, ಮಂಜಯ್ಯ, ಮಮತಾ ನಾಯಕ್, ಜ್ಯೋತಿ, ಕಾಂತರಾಜು, ಕಾವ್ಯಶ್ರೀ, ಅವಿನಾ ಶ್ ಇತರರಿದ್ದರು.