ಕೆ.ಎಂ.ದೊಡ್ಡಿಯ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ವತಿಯಿಂದ ಭಾರತೀ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಭಾರತೀ ಫೆಸ್ಟೋರಿಯಾ-2026 ವಾರ್ಷಿಕೋತ್ಸವ ಮತ್ತು ಕ್ರೀಡೋತ್ಸವದಲ್ಲಿ ಎಸ್‌ಪಿ ಡಾ. ವಿ.ಜಿ.ಶೋಭಾರಾಣಿ ಅವರನ್ನು ಅಭಿನಂದಿಸಲಾಯಿತು. 
ರಾಜ್ಯ

ವಿದ್ಯಾರ್ಥಿಗಳಿಗೆ ಶೇ.100 ಏಕಾಗ್ರತೆಯಿರಲಿ

ವಸಂತಕುಮಾರ್ ಬಿ
ಕೆ.ಎಂ.ದೊಡ್ಡಿ: ಮಾಜಿ ಸಂಸದ ದಿ. ಜಿ.ಮಾದೇಗೌಡ ಅವರ ಕಾವೇರಿ ಹೋರಾಟ ನನ್ನ ವೃತ್ತಿ ಜೀವನದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜಿ. ಶೋಭಾರಾಣಿ ಭಾವುಕರಾದರು.

ಇಲ್ಲಿನ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ವತಿಯಿಂದ ಭಾರತೀ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಭಾರತೀ ಫೆಸ್ಟೋರಿಯಾ-2026 ವಾರ್ಷಿಕೋತ್ಸವ ಮತ್ತು ಕ್ರೀಡೋತ್ಸವ ಸಮಾರಂಭದಲ್ಲಿ ಮಾತನಾಡಿ, ಕಾವೇರಿ ಹೋರಾಟದ ದಿನಗಳು ನನ್ನ ವೃತ್ತಿ ಜೀವನವನ್ನು ಪ್ರಬಲಗೊಳಿಸಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡರು.

ಜಿ.ಮಾದೇಗೌಡ ಅವರು ಹೋರಾಟಕ್ಕೆ ಇಳಿದಿದ್ದಾರೆ ಎಂದರೆ ಜಿಲ್ಲೆಯ ರೈತರು ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗೆ ಇಳಿಯುತ್ತಿದ್ದವು. ಆ ವೇಳೆ ಕಾವೇರಿ ನೀರು ಕುಡಿಯುವುದಿಲ್ಲವೋ ? ನೀನು ಚಳುವಳಿ ಮಾಡಬೇಕು ಎಂದು ಗೌಡರು ಹೇಳುತ್ತಿದ್ದ ದಿನಗಳನ್ನು ನಾನು ಎಂದು ಮರೆಯಲಾಗದು ಎಂದು ಮೇಲಕು ಹಾಕಿದರು.

ಜಿ.ಮಾದೇಗೌಡ ಅವರ ಒರಟುತನ ಬಹಳ ಇಷ್ಟವಾಗುತ್ತಿತ್ತು. ಅಧಿಕಾರಿಗಳ ಬಳಿ ಗೌರವಯುತವಾಗಿ ನಡೆದುಕೊಳ್ಳುತಿದ್ದರು. ತಾಯಿಯಂತೆ ಮಗಳು, ನೂಲಿನಂತೆ ಸೀರೆ ಎಂಬ ಗಾದೆ ಮಾತಿನಂತೆ ತಂದೆಯಂತೆ ಮಗ ಮಧು ಜಿ. ಮಾದೇಗೌಡ ಅವರು ಸಹ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿ ಉತ್ತಮವಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಜೀವನವೇ ಚಿನ್ನದ ಜೀವನವಾಗಿದ್ದು, ಮಕ್ಕಳು ಶೇ.100ರಷ್ಟು ಏಕಾಗ್ರತೆಯಿಂದ ಓದಬೇಕು. ಪಾಲಕರು ಸಹ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡುವುದನ್ನು ಬಿಟ್ಟು ಅವರ ಕಲಿಕೆಗೆ ಪೂಕರ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀ ವಿದ್ಯಾಸಂಸ್ಥೆಯ ಚೇರ‌್ಮನ್, ಎಂಎಲ್‌ಸಿ ಮಧು ಜಿ. ಮಾದೇಗೌಡ ಮಾತನಾಡಿ, ಶಾಲೆಯಲ್ಲಿ ಮಕ್ಕಳು 8 ಗಂಟೆ ಇರುತ್ತಾರೆ. ಇನ್ನೂ 16 ಗಂಟೆ ನಿಮ್ಮ ಜತೆ ಇರುತ್ತಾರೆ. ಆ ಸಂದರ್ಭದಲ್ಲಿ ಮಕ್ಕಳ ಆರೋಗ್ಯ, ಶಿಕ್ಷಣ, ಅವರ ನಡೆಯ ಬಗ್ಗೆ ಗಮನ ನೀಡಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚು ಒಲವು ತೋರುತ್ತಿರುವುದು ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಿಂದ ಮಕ್ಕಳು ದಾರಿತಪ್ಪುತಿದ್ದು, ಪಾಲಕರು ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.

ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಧ್ಯೇಯ. ಪಾಲಕರು ಬಯಸಿದಂತೆ ಸಿಬಿಎಸ್‌ಇ ಅಫಿಲಿಯೇಷನ್ ಈಗ ಲಭಿಸಿದ್ದು, ಉತ್ತಮ ಶಿಕ್ಷಕರ ತಂಡ ಕಟ್ಟಿಕೊಂಡು ಭಾರತೀ ವಿದ್ಯಾ ಸಂಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಶಿಕ್ಷಣ ಸಲಹೆಗಾರರಾದ ಡಾ. ಸವಿತಾ ಲಕ್ಷ್ಮಣ್, ಪ್ರಾಂಶುಪಾಲೆ ಸಿ.ರಮ್ಯಾ ಮಾತನಾಡಿದರು. ಕಾರ್ಯಕ್ರಮವನ್ನು ಪಂಚಕಜ್ಜಾಯ ಖ್ಯಾತಿಯ ಗಾಪಂ ಸದಸ್ಯ ಕೆ.ಟಿ.ಶ್ರೀನಿವಾಸ್ ಉದ್ಘಾಟಿಸಿದರು. ಭಾರತೀ ವಿದ್ಯಾ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಆಶಯ ಜಿ.ಮಧು, ಭಾರತೀ ಪಿಯು ಅಕಾಡೆಮಿ ಆಫ್ ಎಕ್ಸ್‌ಲೆನ್ಸ್ ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ, ತಾಪಂ ಮಾಜಿ ಸದಸ್ಯರಾದ ಬಿ.ಗಿರೀಶ್, ಛತ್ರದಹೊಸಹಳ್ಳಿ ಭರತೇಶ್, ಗ್ರಾಪಂ ಸದಸ್ಯರಾದ ಕೆ.ಟಿ.ಶ್ರೀನಿವಾಸ್, ವಿನಯ್ ಹೊನ್ನೇಗೌಡ ಇತರರು ಇದ್ದರು.