ಬೆಟ್ಟದಪುರದ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಆರ್.ಎಸ್.ದೊಡ್ಡಣ್ಣ, ಗಣೇಶ್, ಮಣಜೂರು ಮಂಜುನಾಥ್, ಕುಮಾರ್, ಅಪ್ಪಣ್ಣ, ಡಾ.ಜೆ.ಸೋಮಣ್ಣ ಇದ್ದರು. 
ರಾಜ್ಯ

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು,ಸಮಯಪ್ರಜ್ಞೆ ಅಳವಡಿಸಿಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಉಪನ್ಯಾಸಕ ಆರ್.ಎಸ್.ದೊಡ್ಡಣ್ಣ
  • ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ
ಬೆಟ್ಟದಪುರ: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸ್ವಚ್ಛತೆ ಮತ್ತು ಸಮಯಪ್ರಜ್ಞೆ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕ ಆರ್.ಎಸ್.ದೊಡ್ಡಣ್ಣ ಸಲಹೆ ನೀಡಿದರು.
ಇಲ್ಲಿನ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಸತ್ತು ಹಾಗೂ ಕ್ರೀಡಾ ಕ್ಲಬ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯರ ಶ್ರಮ, ತ್ಯಾಗ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ಮಣಜೂರು ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಾಲೇಜಿನಲ್ಲಿರುವ ಉತ್ತಮ ಶೈಕ್ಷಣಿಕ ವಾತಾವರಣವನ್ನು ಸದುಪಯೋಗಪಡಿಸಿಕೊಂಡು ಬೌದ್ಧಿಕವಾಗಿ ಬೆಳವಣಿಗೆ ಹೊಂದಬೇಕು. ಶಿಕ್ಷಣ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ದಾರಿದೀಪವಾಗಿದ್ದು, ವಿದ್ಯಾರ್ಥಿ ಜೀವನವನ್ನು ಸದುಪಯೋಗಪಡಿಸಿಕೊಂಡು ಸನ್ನಡತೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಮಾತನಾಡಿ, ಎಳೆಯ ವಯಸ್ಸಿನಲ್ಲಿ ಕಲಿತ ಸಂಸ್ಕಾರ ಜೀವನಪೂರ್ತಿ ಜತೆಯಾಗಿರುತ್ತದೆ. ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಆದರ್ಶ ಪ್ರಜೆಗಳಾಗಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ದೈಹಿಕ ಸದೃಢತೆ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಮರದೂರು ಎಂಆರ್‌ಪಿ ಪ್ರೌಢಶಾಲೆಯ ಶಿಕ್ಷಕ ಜಿ.ಟಿ ಕುಮಾರ್ ಮಾತನಾಡಿ, ಶಾಲಾ-ಕಾಲೇಜುಗಳ ವಿದ್ಯಾರ್ಥಿ ಸಂಘಗಳ ನಾಯಕತ್ವವು ಭವಿಷ್ಯದ ಉತ್ತಮ ನಾಯಕರನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಶಿಕ್ಷಣದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಕರೆ ನೀಡಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಣ್ಣ, ಕಾರ್ಯದರ್ಶಿ ಡಾ.ಜೆ.ಸೋಮಣ್ಣ, ಸದಸ್ಯರಾದ ಭರಮಣ್ಣ, ಬೆಟಗೇರಿ ಸುಧಾಕರ್, ಟಿ.ಆರ್.ಶಕುಂತಲಾ, ಸತೀಶ್‌ಕುಮಾರ್, ಪ್ರಶಾಂತ್ ಕುಮಾರ್, ಸುನೀತಾ, ಚಂದ್ರಿಕಾ, ಶ್ರಾವ್ಯಾ, ಅರ್ಚನಾ, ಪ್ರಾಂಶುಪಾಲ ಅಭಿಜಿತ್, ಉಪನ್ಯಾಸಕರಾದ ಬಸವರಾಜು, ಸುಧಾ, ಅರ್ಪಿತಾ, ಸಿಂಚನಾ, ಶರೀಫ್ ಇದ್ದರು.