ರಾಜ್ಯಪಾಲ ಥಾವರ್‌ಚಂದ್ ಗೆಹಲ್ಲೋತ್ 
ರಾಜ್ಯ

ವಿದ್ಯಾರ್ಥಿಗಳ ಜ್ಞಾನ ಸಮಾಜ,ರಾಷ್ಟ್ರದ ಕಲ್ಯಾಣಕ್ಕೆ ಬಳಕೆಯಾಗಲಿ: ರಾಜ್ಯಪಾಲ ಥಾವರ್‌ಚಂದ್ ಗೆಹಲ್ಲೋತ್ ಅಭಿಮತ

ಬೆಂಗಳೂರು: ಅತ್ಯಂತ ಶ್ರೀಮಂತ ಭಾಷೆಯಾದ ಸಂಸ್ಕೃತವು ಭಾರತದ ಆತ್ಮ ಇದ್ದಂತೆ. ಈ ಭಾಷೆ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲ್ಲೋತ್ ಅಭಿಪ್ರಾಯಪಟ್ಟರು.
ಅರಮನೆ ರಸ್ತೆಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ’ದ ದೀಕ್ಷಾಂತ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸಮಾಜ, ರಾಷ್ಟ್ರದ ಕಲ್ಯಾಣಕ್ಕೆ ಬಳಸಬೇಕು. ಸಂಪಾದಿಸಿರುವ ಜ್ಞಾನ ವೈಯಕ್ತಿಕ ಪ್ರಗತಿಗೆ ಸೀಮಿತವಾಗದೇ, ಸಮಾಜ ಸೇವೆಗೂ ದಾರಿಯಾಗಬೇಕು. ಜ್ಞಾನವು ಜನರ ಹಿತಕ್ಕಾಗಿ ಬಳಸಿದಾಗ ಮಾತ್ರ ಅದರ ನಿಜವಾದ ಮೌಲ್ಯ ಹೊರಹೊಮ್ಮುತ್ತದೆ. ಜ್ಞಾನವು ವಿನಮ್ರತೆ ತರುತ್ತದೆ, ವಿನಮ್ರತೆ ಯೋಗ್ಯತೆಯನ್ನು, ಯೋಗ್ಯತೆ ಸಮೃದ್ಧಿಯನ್ನು ಮತ್ತು ಸಮೃದ್ಧಿ ಸದಾಚಾರ ತರಲಿದೆ. ಪ್ರಾಚೀನ ಜ್ಞಾನ, ಆಧುನಿಕ ವಿಜ್ಞಾನವನ್ನು ಸಂಯೋಜಿಸಿ, ನವೀನತೆ ಮತ್ತು ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಇಡೀ ಜಗತ್ತು ಮಾನಸಿಕ ಒತ್ತಡ, ಪರಿಸರ ಬಿಕ್ಕಟ್ಟು, ಸಾಮಾಜಿಕ ಅಸಮತೋಲನ ಮತ್ತು ಮೌಲ್ಯಹೀನತೆಯಂತಹ ಸವಾಲು ಎದುರಿಸಲು ‘ಸಂಸ್ಕೃತದ ವಸುಧೈವ ಕುಟುಂಬಕಂ’ ಮತ್ತು ‘ಸರ್ವೇ ಭವಂತು ಸುಖಿನಃ’ ಎಂಬ ತತ್ವ ಅಳವಡಿಸಿಕೊಳ್ಳಬೇಕು ಎಂದು ರಾಜ್ಯಪಾಲರು ಸಲಹೆ ನೀಡಿದರು.
ಸಂಸ್ಕೃತ ಭಾಷೆಯ ಮಹತ್ವ ಉಲ್ಲೇಖಿಸಿದ ರಾಜ್ಯಪಾಲರು, ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಅದು ಭಾರತದ ಆತ್ಮವಾಗಿದೆ. ಹಲವು ಭಾಷೆಗಳಿಗೆ ಸಂಸ್ಕೃತ ಮೂಲವಾಗಿದೆ. ನಮ್ಮ ನಾಗರಿಕತೆ, ಸಂಸ್ಕೃತಿ,ತತ್ವಶಾಸ್ತ್ರದ ಮೂಲಾಧಾರವಾಗಿದೆ. ವೇದಗಳು, ಉಪನಿಷತ್ತುಗಳು, ಮಹಾಕಾವ್ಯಗಳು ಸಂಸ್ಕೃತದಲ್ಲೇ ಹುಟ್ಟಿಕೊಂಡಿವೆ. ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನದ ಕ್ಷೇತ್ರದಲ್ಲಿ ಸಂಸ್ಕೃತದ ರಚನಾತ್ಮಕ ಸ್ಪಷ್ಟತೆ ಅದನ್ನು ಅತ್ಯಂತ ಉಪಯುಕ್ತವಾಗಿಸುತ್ತದೆ ಎಂದು ಥಾವರ್‌ಚಂದ್ ಗೆಹಲ್ಲೋತ್ ಹೇಳಿದರು.
ಇದೇ ವೇಳೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಾಧನೆ ಶ್ಲಾಘಿಸಿದ ರಾಜ್ಯಪಾಲರು, ಸಂಸ್ಕೃತ ಅಧ್ಯಯನ, ಸಂಶೋಧನೆ ಮತ್ತು ಅಂತಾರಾಷ್ಟ್ರೀಯ ಸಹಯೋಗದಲ್ಲಿ ಇನ್ನಷ್ಟು ಎತ್ತರಗಳನ್ನು ಸಾಧಿಸಲಿ ಎಂದು ಹಾರೈಸಿದರು.
ಹೇರಳ ಜ್ಞಾನಸಂಪತ್ತು ಅಡಗಿದೆ:
ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿದಂತೆ ನೈತಿಕ ಶಿಕ್ಷಣ ಮೌಲ್ಯ ಮತ್ತು ಸಿದ್ಧಾಂತಗಳು ಕುಸಿಯುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಸಾಕ್ಷರತೆ ಪ್ರಮಾಣ ಶೇ.30ರಷ್ಟಿತ್ತು. ಆದರೆ, ನೈತಿಕತೆ ಶೇ.100ರಷ್ಟಿತ್ತು. ಆದರೆ, ಪ್ರಸ್ತುತ ಸಾಕ್ಷರತೆ ಪ್ರಮಾಣ ಶೇ.85 ಇದ್ದರೆ, ನೈತಿಕ ಮೌಲ್ಯಗಳ ಪ್ರಮಾಣ ಶೇ.30ಕ್ಕೆ ಇಳಿದಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು. ಸಂಸ್ಕೃತ ಬರೀ ಒಂದು ಭಾಷೆಯಲ್ಲ. ಅದು ನಮ್ಮ ನೈತಿಕ ಮೌಲ್ಯ, ಸಿದ್ಧಾಂತಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದೆ. ಈ ಭಾಷೆಯಲ್ಲಿ ಹೇರಳ ಜ್ಞಾನಸಂಪತ್ತು ಅಡಗಿದೆ. ಕನ್ನಡ ಸೇರಿ ಹಲವು ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವ ಇದೆ. ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದರ ಬಗ್ಗೆ ಭಗವದ್ಗೀತೆ ನಮಗೆ ಮಾರ್ಗದರ್ಶನ ನೀಡುತ್ತದೆ.ವಿಶ್ವವಿದ್ಯಾಲಯಗಳು ಗುಣಮಟ್ಟ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತಾಗಬೇಕು. ಜನರು ಮೌನವೀಯ ಮೌಲ್ಯ ರೂಡಿಸಿಕೊಳ್ಳಬೇಕು ಎಂದರು.
ಡಿ.ಲಿಟ್ ಪದವಿ ಪ್ರದಾನ:
ಮಹಾಬೋಧಿ ಸೊಸೈಟಿಯ ಬೌದ್ಧ ಭಿಕ್ಕು ಆನಂದ ಥೇರೊ, ವಿದ್ವಾಂಸರಾದ ಪುಷ್ಪಾ ದೀಕ್ಷಿತ್, ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ, ಪ್ರೊ.ಎಚ್.ಎಂ.ಶಿಂಗಪ್ಪ ಮತ್ತು ಪ್ರೊ.ಸುಕಾಂತ್ ಕುಮಾರ್ ಸೇನಾಪತಿ ಅವರಿಗೆ ಡಿ.ಲಿಟ್ ಪದವಿ ನೀಡಿ ಗೌರವಿಸಲಾಯಿತು. 2023-24 ಮತ್ತು 2024-25ನೇ ಸಾಲಿನ ಒಟ್ಟು 917 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 21 ವಿದ್ಯಾರ್ಥಿಗಳು ನಗದು ಬಹುಮಾನ ಪಡೆದರೆ, ಕ್ರಮವಾಗಿ 26 ಹಾಗೂ 27 ವಿದ್ಯಾರ್ಥಿಗಳು ಚಿನ್ನದ ಪದಕ ಸ್ವೀಕರಿಸಿದರು. 36 ಅಭ್ಯರ್ಥಿಗಳು ಪಿಎಚ್.ಡಿ ಪದವಿ ಪಡೆದರು. ವಿವಿ ರಿಜಿಸ್ಟ್ರಾರ್ ಪ್ರೊ.ವಿ.ಗಿರೀಶ್‌ಚಂದ್ರ, ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಕೆ.ರಾಮಕೃಷ್ಣಭಟ್ ಮತ್ತಿತರರಿದ್ದರು.
ಪದವಿ ಕೇವಲ ಪ್ರಮಾಣಪತ್ರವಲ್ಲ. ಅದು ಸಮಾಜದಲ್ಲಿ ಬದಲಾವಣೆ ತರಬಲ್ಲ ದೊಡ್ಡ ಶಕ್ತಿಯಾಗಿದೆ. ಸಂಸ್ಕೃತ ವಿವಿಯಲ್ಲಿ ಡಿಜಿಟಲ್ ಗ್ರಂಥಾಲಯ, ತಾಂಡು ಲಿಪಿ ಸಂರಕ್ಷಣೆ, ಕೃತಕಬುದ್ದಿಮತ್ತೆ(ಎಐ) ತರಬೇತಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗದಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
- ಡಾ.ಎಸ್.ಅಹಲ್ಯ, ಕರ್ನಾಟಕ ಸಂಸ್ಕೃತ ವಿವಿ ಕುಲಪತಿ.