70ನೇ ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ನೃತ್ಯ
- ಕಂಠೀರವದಲ್ಲಿ ಕನ್ನಡ ರಾಜ್ಯೋತ್ಸವ
- ವಿದ್ಯಾರ್ಥಿಗಳಿಂದ ಕನ್ನಡ ಡಿಂಡಿಮ
- 1,700 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ
ಬೆಂಗಳೂರು: ವಿದ್ಯಾರ್ಥಿಗಳ ಕೈಯಲ್ಲಿ ಕೆಂಪು ಹಳದಿ ಬಣ್ಣದ ದೊಡ್ಡ ದೊಡ್ಡ ಬಾವುಟಗಳು, ತಾಯಿ ಭುವನೇಶ್ವರಿ ಪಟಗಳು, ಕನ್ನಡ ನಾಡಿನ ಹೆಗ್ಗುರುತುಗಳನ್ನು ಸಾರುವ ಬ್ಯಾನರ್‌ಗಳು, ಕೆಂಪು-ಹಳದಿ ವೇಷಭುಷಣ, ಕನ್ನಡ-ಕನ್ನಡ ಎಂಬ ಘೋಷವಾಕ್ಯಗಳು....
ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆಯು ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳು, ಕನ್ನಡ ಡಿಂಡಿಮ ಬಾರಿಸಿದ ಪರಿ ಇದು.
ಕಳೆದ ಒಂದು ವಾರದಿಂದ ನಗರದ ವಿವಿಧ ಖಾಸಗಿ ಮತ್ತು ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಒಟ್ಟುಗೂಡಿ ನಡೆಸಿದ್ದ ತಾಲೀಮನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಶಿಕ್ಷಣ ಸಚಿವರನ್ನು ಒಳಗೊಂಡಂತೆ ಗಣ್ಯರ ಎದುರು ಪ್ರದರ್ಶಿಸಬೇಕೆಂಬ ಉತ್ಸಾಹದಿಂದ ವಿದ್ಯಾರ್ಥಿಗಳು ಸೇರಿದ್ದರು. ಹಸಿರು ಮೈದಾನದಲ್ಲಿ ಕೆಂಪು-ಹಳದಿ ಬಣ್ಣವು ಅರಿಶಿಣ-ಕುಂಕುಮದ ಚೆಲ್ಲಿದ ದೃಶ್ಯಕಾವ್ಯದಂತೆ ವಿದ್ಯಾರ್ಥಿಗಳು ಕಂಗೊಳಿಸುತ್ತಿದ್ದರು.
ವೈಭವಯುತ ನೃತ್ಯ ಪ್ರದರ್ಶನ
ಕನ್ನಡ ನಾಡು, ನುಡಿ, ಸಂಸ್ಕೃತಿ, ಆಚಾರ-ವಿಚಾರ, ಎರಡು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯು ಸವಿಗನ್ನಡವಾಗಿದೆ. ನಾವು ಕುಡಿಯುವ ಕಾವೇರಿ ನೀರು, ಸಹ್ಯಾದ್ರಿ ಮಲೆನಾಡು, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಸಾಹಿತ್ಯದ ಎಷ್ಟು ಶ್ರೀಮಂತವಾಗಿದೆ ಎಂಬುದನ್ನು ಸಾರಿ ಹೇಳಿದ ಪರಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು.
ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯ ಮತ್ತು ಗುಣಮಟ್ಟದ ಶಿಕ್ಷಣವನ್ನು ಬಿಂಬಿಸುವ ನೃತ್ಯ ಹಾಗೂ ಅಗರ ಕೆಪಿಎಸ್ ಶಾಲೆ ವಿದ್ಯಾರ್ಥಿಗಳಿಂದ ಕನ್ನಡ ರಾಜ್ಯೋತ್ಸವದ ಆಚರಣೆಯ ಮಹತ್ವ, ಕನ್ನಡ ನಾಡು ಸಿರಿ ಸಂಪತ್ತಿನ ಬೀಡು ಎಂಬುದನ್ನು ಮನಮುಟ್ಟುವಂತೆ ನೃತ್ಯ ಪ್ರದರ್ಶಿಸಿದರು.
ಎರಡೂ ನೃತ್ಯಗಳಿಂದ ಸುಮಾರು 1,700ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ತುಂಬಾ ಉತ್ಸಾಹದಿಂದ ಕನ್ನಡ ನಾಡು-ನುಡಿ, ಸಂಸ್ಕೃತಿ, ಶಿಲ್ಪಕಲೆ, ನದಿಗಳನ್ನು ತಿಳಿಸುವ ಮೂಲಕ ಕರುನಾಡು ಎಷ್ಟು ಸಂಪದ್ಭರಿತ ನಾಡಾಗಿದೆ ಎಂಬುದನ್ನು ಸಾರಿ ಹೇಳಿದರು.
ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಕೇವಲ ಹಾಡಿನಲ್ಲಿ ಮಾತ್ರ ಇರಲಿಲ್ಲ. ಕೆಂಪು ಹಳದಿ ಬಣ್ಣದ ವೇಷಭೂಷಣದಲ್ಲಿ ಮಿಂಚಿದರು. ನೃತ್ಯ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ವೇಳೆ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು.
ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ
ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಯಿತು. ಸಾಂಕೇತಿಕವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ವಿತರಣೆ ಮಾಡಿದರು.