ಬೆಟ್ಟದಪುರ ಸಮೀಪದ ಅರಳಿಮರದ ಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ದೇವರಾಜು ನಿವೃತ್ತಿ ಹಿನ್ನೆಲೆ ಸನ್ಮಾನಿಸಲಾಗುವುದು.  
ರಾಜ್ಯ

ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ಗೌರವ

ಬೆಟ್ಟದಪುರ:

ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಶಿಕ್ಷಕರ ಶ್ರಮ ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ದೊರೆಯುವ ಶ್ರೇಷ್ಠ ಗೌರವ ಎಂದು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕವಿತಾ ಅಭಿಪ್ರಾಯಪಟ್ಟರು.

ಪಿರಿಯಾಪಟ್ಟಣ ತಾಲೂಕಿನ ಅರಳಿಮರದ ಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮುಖ್ಯಶಿಕ್ಷಕ ದೇವರಾಜು ಅವರ ನಿವೃತ್ತಿ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣ ಇಲಾಖೆಯಲ್ಲಿ ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ದೇವರಾಜು ಅವರು ಪ್ರಾಮಾಣಿಕತೆ, ಶಿಸ್ತು ಮತ್ತು ಸರಳತೆಯಿಂದ ಕರ್ತವ್ಯ ನಿರ್ವಹಿಸಿ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಸೇವೆ ಶಿಕ್ಷಕ ಸಮುದಾಯಕ್ಕೆ ಮಾದರಿ ಎಂದು ಹೇಳಿದರು.
ನಿವೃತ್ತ ಬಿಆರ್‌ಪಿ ಕಾಳೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವು ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಮತ್ತು ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಸುಮಾರು ಮೂರು ದಶಕಗಳಿಗೂ ಅಧಿಕ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ದೇವರಾಜು ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಕಮಲಮ್ಮ ದೇವರಾಜು, ಶಿಕ್ಷಕರಾದ ಸ್ವಾಮಿ, ರಾಜು, ಜಗದೀಶ್, ನಳಿನಿ, ಸುನೀತಾ, ರವಿಕುಮಾರ್, ರಮ್ಯಾ, ಆಶಾ, ಶ್ರುತಿ, ಸತೀಶ್, ಮುಖಂಡರಾದ ಜವರೇಗೌಡ, ಜಯಣ್ಣ, ಮಲ್ಲೇಶ್ ಇತರರು ಇದ್ದರು.