Student loses ₹59,000 after opening a link!
ಚಿಂತಾಮಣಿ: ವಾಟ್ ಆ್ಯಪ್ ಗ್ರೂಪ್ಗೆ ಬಂದ ಲಿಂಕ್ ಓಪನ್ ಮಾಡಿದ ವಿದ್ಯಾರ್ಥಿಯೊಬ್ಬರು ಖಾತೆಯಿಂದ 59,998 ರೂ. ಕಳೆದುಕೊಂಡಿದ್ದಾರೆ. ತಾಲೂಕಿನ ನಾಯಂದ್ರಹಳ್ಳಿಯ ನಿವಾಸಿ, ಚಿಕ್ಕಬಳ್ಳಾಪುರದ ಸಿದ್ದರಾಮಯ್ಯ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ದಿಲೀಪ್ ಯಾದವ್ (23) ಹಣ ಕಳೆದುಕೊಂಡವರು. ದಿಲೀಪ್ ಕೋಲಾರದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದು, ಅದಕ್ಕೆ ಫೋನ್ ಪೇ ಲಿಂಕ್ ಮಾಡಿಕೊಂಡಿದ್ದರು.
2026 ಮಾರ್ಚ್ 3ರಂದು ವಾಟ್ಸ್ಆ್ಯಪ್ ಲಿಂಕ್ ಬಂದಿತ್ತು. ಅದನ್ನು ಓಪನ್ ಮಾಡಿ ನೋಡಿದ್ದರು. 2026 ಜುಲೈ 13ರಂದು ದಿಲೀಪ್ ಖಾತೆಯಿಂದ 2 ಹಂತಗಳಲ್ಲಿ ಹಣ ಕಡಿತವಾಗಿದೆ. 19,999, 39,999 ಸೇರಿ ಒಟ್ಟು 59,998 ರೂ. ಅಪರಿಚಿತರ ಖಾತೆಗೆ ವರ್ಗಾವಣೆಯಾಗಿದೆ. ಈ ಬಗ್ಗೆ ಜು.16ರಂದು ಚಿಂತಾಮಣಿ ಗ್ರಾಮಾಂತರ ಠಾಣೆಗೆ ಪ್ರಕರಣ ದಾಖಲಿಸಿದ್ದಾರೆ.