ಚಿಂತಾಮಣಿ&ಬೆಂಗಳೂರು ರಸ್ತೆಯ ಕಟಮಾಚನಹಳ್ಳಿ ಗೇಟ್ ಬಳಿ ಶನಿವಾರ ಬೆಳಗ್ಗೆ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಹಿಂಬದಿ ಕುಳಿತಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದು, ಇಬ್ಬರು ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡಿದ್ದಾರೆ.
ಶ್ರೀನಿವಾಸಪುರ ತಾಲೂಕಿನ ಸುನ್ಕಲ್ ಗ್ರಾಮದ ದೀಪಿಕಾ (16) ಮೃತೆ. ಮತ್ತೊಬ್ಬ ಗಾಯಾಳು ಮರಿಮಾಕನಹಳ್ಳಿಯ ಸ್ಮಿತಾಗೆ (16) ಕಾಲು ಮುರಿದಿದ್ದು, ಆಕೆಯನ್ನು ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂತಾಮಣಿ ಅಗ್ರಹಾರ ಬಡಾವಣೆಯ ನಿವಾಸಿ ತ್ರಿಪುರಾ (16) ತಲೆಗೆ ಗಂಭೀರ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮೂವರು ವಿದ್ಯಾರ್ಥಿನಿಯರು ಚಿಂತಾಮಣಿಯ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಸ್ವಾತಂತ್ರ$್ಯ ದಿನದ ಪ್ರಯುಕ್ತ ಕಾಲೇಜಿಗೆ ಬಂದಿದ್ದ ಅವರು, ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ಕೈವಾರ ದೇವಾಲಯಕ್ಕೆ ಬೈಕ್ನಲ್ಲಿ ಸ್ನೇಹಿತರೊಂದಿಗೆ ತೆರಳುತ್ತಿದ್ದರು. ಮೈಲಾಪುರ ಮಾರ್ಗವಾಗಿ ಕೈವಾರಕ್ಕೆ ತೆರಳಲು ಚಿಂತಾಮಣಿ& ಬೆಂಗಳೂರು ಮುಖ್ಯರಸ್ತೆಯಲ್ಲಿ ಕಟಮಾಚನಹಳ್ಳಿ ಗೇಟ್ ಬಳಿ ಬೈಕ್ ಯೂರ್ಟನ್ ತೆಗೆದುಕೊಂಡಾಗ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿಯಾಗಿದೆ.
ಸ್ಮಿತಾ ಬೈಕ್ ಚಲಾಯಿಸುತ್ತಿದ್ದಳು. ಮಧ್ಯದಲ್ಲಿ ಕುಳಿತಿದ್ದ ತ್ರಿಪುರಾಗೆ ತಲೆಗೆ ಪೆಟ್ಟಾಗಿದೆ. ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲಿಸಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ರವಾನಿಸಿದರು. ಅಪಘಾತದ ಬಳಿಕ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.