ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದೇಶದ ಪ್ರತಿ ಹಳ್ಳಿ ಹಾಗೂ ರೈತರು ಸರ್ವತೋಮುಖ ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ದೇಶದ ಸಂಪೂರ್ಣ ಅಭಿವೃದ್ಧಿ ಸಾಧ್ಯ ಎಂಬ ಕನಸನ್ನು ಸಾಕಾರಗೊಳಿಸುವಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿದ್ದ ಮನರೇಗಾ ಉದ್ಯೋಗ ಖಾತ್ರಿ ಯೋಜನೆಗೆ ನರೇಂದ್ರ ಮೋದಿ ಗಾಂಧೀಜಿ ಹೆಸರನ್ನೇ ನಾಮಾವಶೇಷ ಮಾಡುವ ಮೂಲಕ ಮರುನಾಮಕರಣ ಮಾಡಲು ಹೊರಟಿರುವುದನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಂತ್ರಿಮಂಡಲವು ಈಗಾಗಲೇ ಈ ಯೋಜನೆಗೆ ಪೂಜ್ಯ ಬಾಪು ಗ್ರಾಮೀಣ ರೋಜಗಾರ್ ಖಾತರಿ ಎಂದು ಮರುನಾಮಕರಣ ಮಾಡಲು ನಿರ್ಧರಿಸಿತ್ತು. ಆದರೆ,ಏಕಾಏಕಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸುವ ಮೂಲಕ ಗಾಂಧೀಜಿ ಹೆಸರನ್ನು ಹೊರಗಿಟ್ಟು ಜನಪ್ರಿಯ ಕಲ್ಯಾಣ ಕಾರ್ಯಕ್ರಮದ ಯಶಸ್ಸನ್ನು ತನ್ನದಾಗಿಸಿಕೊಳ್ಳುವ ದುರುದ್ದೇಶದಿಂದ ವಿಬಿಜಿ ರಾಮ್ ಜಿ ಎಂಬಂತಹ ಜನತೆಗೆ ಗೊಂದಲವನ್ನುಂಟು ಮಾಡುವ ನಾಮಾಂಕಿತವನ್ನು ಇಡುತ್ತಿರುವುದು ಪೂಜ್ಯ ಗಾಂಧೀಜಿಯವರಿಗೆ ಮಾಡಿದಂತಹ ಪರಮ ದ್ರೋಹ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಂಧೀಜಿಯವರ ಸ್ವರಾಜ್ಯ ಕಲ್ಪನೆಗೆ, ಅವರ ತ್ಯಾಗ ಬಲಿದಾನಕ್ಕೆ, ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವಂತಹ ಕೋಮುವಾದಿ ಸಂಘಟನೆಗಳ ಮೂಲ ಅಜೆಂಡಾವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ದುಷ್ಟ ಪ್ರಯತ್ನಕ್ಕೆ ಕೈ ಹಾಕಿದೆ.ಇದನ್ನು ಭಾರತೀಯರು ಎಂದಿಗೂ ಸಹಿಸುವುದಿಲ್ಲ. ಇಡೀ ವಿಶ್ವದೆದುರು ತಲೆತಗ್ಗಿಸುವಂತಹ ಇಂತಹ ನೀಚ ಕೆಲಸಗಳಿಗೆ ಕೈ ಹಾಕುತ್ತಿರುವ ಪ್ರಧಾನಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆಮ್ ಆದ್ವಿ ಪಕ್ಷವು ತೀವ್ರ ಖಂಡನೆಯನ್ನು ವ್ಯಕ್ತಪಡಿಸುತ್ತದೆ ಎಂದರು.