ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಸಿಇಒ ರಿಷಿ ಆನಂದ ಕೂಲಿ ಕಾರ್ಮಿಕರರೊಂದಿಗೆ ಚರ್ಚೆ ಮಾಡುತ್ತಿರುವುದು. 
ರಾಜ್ಯ

ತಿಕೋಟಾ ಮಾದರಿ ತಾಲೂಕನ್ನಾಗಿಸಲು ಶ್ರಮಿಸಿ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ರಿಷಿ ಆನಂದ ಸೂಚನೆ
  • ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ

ತಿಕೋಟಾ: ವಿಬಿ-ಜಿ ರಾಮ್-ಜಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಅರ್ಹ ಕೂಲಿಕಾರರಿಗೆ ನಿರಂತರ ಉದ್ಯೋಗ ಒದಗಿಸುವ ಮೂಲಕ ಮಾನವ ದಿನಗಳ ಸೃಜನೆಯಲ್ಲಿ ಗಣನೀಯ ಪ್ರಗತಿ ಸಾಧಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ಷೇತ್ರ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ತಿಕೋಟಾ ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕನ್ನಾಗಿಸಲು ಶ್ರಮಿಸಬೇಕು ಎಂದು ಜಿಪಂ ಸಿಇಒ ರಿಷಿ ಆನಂದ ಸೂಚಿಸಿದರು.

ತಿಕೋಟಾ ತಾಲೂಕಿನಾದ್ಯಂತ ಸಂಚಾರ ನಡೆಸಿದ ಸಿಇಒ ಅವರು, ಲೋಹಗಾಂವ, ಟಕ್ಕಳಕಿ, ಜಾಲಗೇರಿ, ಹೊನವಾಡ ಹಾಗೂ ತೊರವಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ವಿಬಿ-ಜಿ ರಾಮ್-ಜಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು, ಕಾರ್ಮಿಕರ ಹಾಜರಾತಿ, ಉದ್ಯೋಗ ಸೃಜನ ಹಾಗೂ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದರು.
ಲೋಹಗಾಂವ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಸಿಇಒ ಅವರು, ಪ್ರಗತಿಯಲ್ಲಿರುವ ಕಾಮಗಾರಿ ಸ್ಥಳಕ್ಕೆ ತೆರಳಿ ಕೂಲಿಕಾರರೊಂದಿಗೆ ನೇರವಾಗಿ ಸಂವಾದ ನಡೆಸಿದರು.
ಯೋಜನೆಯಡಿ ಕೂಲಿಕಾರರಿಗೆ ದೊರೆಯುತ್ತಿರುವ ಸೌಲಭ್ಯಗಳು, ಕೆಲಸದ ಲಭ್ಯತೆ ಹಾಗೂ ಇತರ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ಅವರ ಕುಂದು-ಕೊರತೆಗಳನ್ನು ಆಲಿಸಿದರು.
ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಅರ್ಹ ಕೂಲಿಕಾರರನ್ನು ಯೋಜನೆಯಡಿ ಕೆಲಸಕ್ಕೆ ಕರೆ ತರುವಂತೆ ತಿಳಿಸಿದ ಅವರು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತಿದಿನ 150ರಿಂದ 200 ಮಂದಿ ಕೂಲಿಕಾರರಿಗೆ ನಿರಂತರವಾಗಿ ಉದ್ಯೋಗ ಒದಗಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ತೊರವಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅವರು, ಯೋಜನೆಯಡಿ ಇನ್ನಷ್ಟು ವೇಗವಾಗಿ ಪ್ರಗತಿ ಸಾಧಿಸಲು ಹಾಗೂ ಅರ್ಹ ಕೂಲಿಕಾರರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ವಿಬಿ-ಜಿ ರಾಮ್-ಜಿ ಯೋಜನೆಯಡಿ ಅಂಗವಿಕಲ ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು ಹಾಗೂ ಹಿರಿಯ ನಾಗರಿಕರಿಗೆ ಕೆಲಸದ ಪ್ರಮಾಣದಲ್ಲಿ ವಿಶೇಷ ರಿಯಾಯಿತಿ ಸೌಲಭ್ಯಗಳಿದ್ದು, ಅರ್ಹ ಕೂಲಿಕಾರರಿಗೆ ಈ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಸಮರ್ಪಕವಾಗಿ ಒದಗಿಸಬೇಕು ಎಂದು ಸಿಇಒ ಸೂಚಿಸಿದರು.
ಅರ್ಹ ಕೂಲಿಕಾರರಿಗೆ ಹೆಚ್ಚಿನ ಉದ್ಯೋಗ ಒದಗಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯ ಸಮುದಾಯ ಕಾಮಗಾರಿಗಳನ್ನು ಮುಂಚಿತವಾಗಿ ಗುರುತಿಸಿ ಸಿದ್ಧಪಡಿಸಿಕೊಳ್ಳಬೇಕು ವಿಶೇಷವಾಗಿ ಕೆರೆ ಪುನಶ್ಚೇತನ, ಕಾಲುವೆ ಪುನಶ್ಚೇತನ, ಗೋಮಾಳ ಅಭಿವೃದ್ಧಿ ಸೇರಿ ಗ್ರಾಮೀಣ ಪ್ರದೇಶದ ಅಗತ್ಯತೆಗಳಿಗೆ ಅನುಗುಣವಾದ ವಿವಿಧ ಸಮುದಾಯ ಕಾಮಗಾರಿಗಳನ್ನು ಪ್ರಥಮ ಆದ್ಯತೆಯಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ತಾಪಂ. ಇಒ ಆನಂದಕುಮಾರ ಮ್ಯಾಗೇರಿ, ಹೊನವಾಡ ಆಡಳಿತಾಧಿಕಾರಿ ಅನ್ವರಹುಸೇನ ನದಾಫ, ಪಿಡಿಒಗಳಾದ ಪದ್ಮಿನಿ ಬಿರಾದಾರ, ಅಕ್ಕಮಹಾದೇವಿ ಪವಾರ, ಜಾಫರ ಕಲಾದಗಿ, ಶೋಭಕ್ಕ ಶಿಳಿನ ಹಾಗೂ ರಾಜಶ್ರೀ ತುಂಗಳ, ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಕಲ್ಲಪ್ಪ ನಂದರಗಿ ಮತ್ತಿತರರಿದ್ದರು.