- ಡಿಸಿ ಫೌಜಿಯಾ ತರನ್ನುಮ್ ಎಚ್ಚರಿಕೆ
- ಎಲ್ಪಿಜಿ ಸಿಲಿಂಡರ್ಗೆ ಕೊರತೆಯಿಲ್ಲ
ಕಲಬುರಗಿ: ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೆಲ್ ಮತ್ತು ಎಲ್ಪಿಜಿ ಸಿಲಿಂಡರ್ ಸೇರಿದಂತೆ ಇಂಧನ ಕೊರತೆ ಇಲ್ಲ. ಎಲ್ಲವೂ ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗೆ ಸಾರ್ವಜನಿಕರು ಕಿವಿಗೊಡಬಾರದು. ವದಂತಿ ಹರಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಾದ್ಯಂತ ಎಲ್ಲ ತೈಲ ಕಂಪನಿ ಬಳಿ ಮತ್ತು ಪೆಟ್ರೋಲ್ ಬಂಕ್ಗಳಲ್ಲಿ ಸಾಕಷ್ಟು ಪ್ರಮಾಣದ ಇಂಧನ ದಾಸ್ತಾನು ಇದೆ. ಪೆಟ್ರೋಲ್ ಬಂಕ್ಗಳಿಗೆ ನಿರಂತರವಾಗಿ ಇಂಧನ ಪೂರೈಕೆಯಾಗುತ್ತಿದೆ. ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿಲ್ಲ. ಜನರು ಆತಂಕಗೊಳ್ಳಬಾರದು. ಸಿಲಿಂಡರ್, ಇಂಧನ ಅಭಾವ ಕುರಿತು ಸುಳ್ಳು ಸುದ್ದಿ ಹರಡುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ಗಳ ಸರಬರಾಜು ಸಮರ್ಪಕವಾಗಿ ನಡೆಯುತ್ತಿದೆ. ಗೃಹ ಬಳಕೆ ಸಿಲಿಂಡರ್ ಪಡೆಯಲು ಈ ಹಿಂದೆ ಪಡೆದ ದಿನಾಂಕದಿಂದ 25 ದಿನಗಳ ಬಳಿಕವೇ ನಗರ ಪ್ರದೇಶದ ಗ್ರಾಹಕರು ಬುಕ್ಕಿಂಗ್ ಮಾಡಬೇಕಾಗುತ್ತದೆ. ಗ್ರಾಮಾಂತರ ಪ್ರದೇಶದ ಗ್ರಾಹಕರು 45 ದಿನಗಳ ಬಳಿಕವೇ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಾಸ್ತವದ ವಿಷಯ ಅರಿಯದೆ ಗ್ರಾಹಕರು ಗ್ಯಾಸ್ ಏಜೆನ್ಸಿಗಳಿಗೆ ಮುಗಿಬೀಳುತ್ತಿರುವುದರಿಂದ ಅನಗತ್ಯ ಜನಸಂದಣಿಯಾಗಿ ಗೊಂದಲು ಸೃಷ್ಟಿಯಾಗುತ್ತಿದೆ ಎಂದಿದ್ದಾರೆ.
ಹೆಚ್ಚುವರಿ ದಾಸ್ತಾನು ಮಾಡಬೇಡಿ
ಗೃಹ ಬಳಕೆಯ ಅಡುಗೆ ಅನಿಲ ಗ್ರಾಹಕರು ಹಾಗೂ ವಾಣಿಜ್ಯ ಬಳಕೆ ಗ್ರಾಹಕರಾದ ಹೋಟೆಲ್, ರೆಸ್ಟೋರೆಂಟ್ ಮಾಲೀಕರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಜಿಲ್ಲಾಡಳಿತವು ಎಚ್ಪಿಸಿ, ಐಓಸಿ ಮತ್ತು ಬಿಪಿಸಿ ತೈಲ ಕಂಪನಿಗಳ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಪೆಟ್ರೋಲ್, ಡಿಸೇಲ್ ಮತ್ತು ಎಲ್ಪಿಜಿ ಸಿಲಿಂಡರ್ ಕೊರತೆಯಾಗದಂತೆ ಬೇಡಿಕೆಗೆ ಅನುಗುಣವಾಗಿ ಅಗತ್ಯ ದಾಸ್ತಾನನ್ನು ಸಂಗ್ರಹಿಸಿಟ್ಟಿಕೊಳ್ಳಲು ಸೂಕ್ತ ಸೂಚನೆ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಹೆಚ್ಚುವರಿಯಾಗಿ ದಾಸ್ತಾನು ಮಾಡಿಟ್ಟುಕೊಳ್ಳಬಾರದು ಎಂದು ಡಿಸಿ ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.