ಅಫಜಲಪುರದಲ್ಲಿ ರೌಡಿಶೀಟರ್ ಮನೆಗಳಿಗೆ ಸಿಪಿಐ ಲಖನ್ ಮಸಗುಪ್ಪಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ
- ಸಿಪಿಐ ಲಖನ್ ಮಸಗುಪ್ಪಿ ಎಚ್ಚರಿಕೆ
- ಅಫಜಲಪುರದಲ್ಲಿ ರೌಡಿಶೀಟರ್ ಮನೆಗಳಿಗೆ ದಿಢೀರ್ ಭೇಟಿ
ಅಫಜಲಪುರ: ಈಗಾಗಲೇ ನಿಮ್ಮ ಮೇಲೆ ರೌಡಿಶೀಟರ್ ತೆರೆದಿದ್ದು, ನಿಮ್ಮ ಚಟುವಟಿಕೆಗಳ ಮೇಲೆ ವಿಶೇಷ ನಿಗಾವಹಿಸಲಾಗುತ್ತಿದೆ. ಯಾವುದಾದರೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ್ರೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿಪಿಐ ಲಖನ್ ಮಸಗುಪ್ಪಿ ಎಚ್ಚರಿಕೆ ನೀಡಿದರು.
ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶುಕ್ರವಾರ ಪಟ್ಟಣದಲ್ಲಿ ರೌಡಿಶೀಟರ್ಗಳ ಮನೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿ ಒತ್ತಡ ಹಾಕುವುದು ಹಾಗೂ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಸಮಾಜದ ಶಾಂತಿ ಕದಡುವುದು ಮಾಡಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಮುಲಾಜಿಲ್ಲದೆ ಬಂಧಿಸಿ ಕ್ರಮವಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗುಂಪು ಕಟ್ಟಿಕೊಂಡು ರಸ್ತೆ ಬದಿಗಳಲ್ಲಿ ನಿಲ್ಲುವುದು. ಅಡ್ಡೆಗಳನ್ನು ಮಾಡಿ ಬೆದರಿಕೆ, ಹಲ್ಲೆ, ಅಕ್ರಮ ವಸೂಲಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಬಾರದು. ತಾಲೂಕಿನಲ್ಲಿ ಅಪರಾಧ ನಿಯಂತ್ರಿಸಿ, ಸಾರ್ವಜನಿಕರಲ್ಲಿ ಸುರತ ಭಾವನೆ ಮೂಡಿಸುವುದು ಇಲಾಖೆಯ ಧ್ಯೇಯವಾಗಿದೆ. ದಿಢೀರ್ ಪರಿಶೀಲನೆ ಹಾಗೂ ರೌಡಿ ಪರೇಡ್ ನಿರಂತರ ನಡೆಸಲಾಗುವುದು ಎಂದು ಹೇಳಿದರು.
ಮಕ್ತುಮ್ ಪಟೇಲ್, ಸಂತೋಷ ಮಲಘಾಣ, ಭಾಗಣ್ಣ ಸಾತಿಹಾಳ, ಆನಂದ ಸ್ವಾಮಿ ಇತರರಿದ್ದರು.