ಕಲಬುರಗಿ ತಹಸೀಲ್ದಾರ್ ಕೆ.ಆನಂದಶೀಲ್ ಅಧ್ಯಕ್ಷತೆಯಲ್ಲಿ ಗ್ಯಾಸ್ ಏಜೆನ್ಸಿ ವಿತರಕರೊಂದಿಗೆ ಕಚೇರಿ ಸಭಾಂಗಣದಲ್ಲಿ ಇತ್ತೀಚಿಗೆ ಸಭೆ ಜರುಗಿತು.
ಕಲಬುರಗಿ: ನಗರ ಮತ್ತು ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಅಡುಗೆ ಅನಿಲ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದು, ಗ್ಯಾಸ್ ಮತ್ತು ಇಂಧನ ಅಭಾವ ಎಂದು ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಲಬುರಗಿ ತಹಸೀಲ್ದಾರ್ ಕೆ.ಆನಂದಶೀಲ ಎಚ್ಚರಿಸಿದರು.
ತಹಸೀಲ್ ಕಚೇರಿಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶದ ಗ್ಯಾಸ್ ಏಜೆನ್ಸಿ ವಿತರಕರೊಂದಿಗೆ ಶನಿವಾರ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳಿಗೆ ಯಾವುದೇ ಕೊರತೆ ಇಲ್ಲ. ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುಳ್ಳು ಸುದ್ದಿ ನಂಬಬಾರದು. ಗ್ರಾಹಕರು ಯಾವುದೇ ಕಾರಣಕ್ಕೂ ಗಾಬರಿಗೊಂಡು ಅತಿಯಾಗಿ ಬುಕ್ಕಿಂಗ್ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಕೆಲ ಗ್ರಾಹಕರು ಅನಗತ್ಯ ಆತಂಕಗೊಂಡು ಏಕಕಾಲಕ್ಕೆ ಮಿಸ್ಡ್ ಕಾಲ್ ಮೂಲಕ ಬುಕ್ಕಿಂಗ್ ಮಾಡಲು ಪ್ರಯತ್ನಿಸುತ್ತಿರುವ ಕರೆಗಳ ಒತ್ತಡದಿಂದ ಸಿಸ್ಟಮ್ಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗುತ್ತಿವೆ. ಹೀಗಾಗಿ ಪರ್ಯಾಯವಾಗಿ ಐಒಸಿಎಲ್, ಬಿಪಿಸಿಎಲ್, ಎಚ್ಪಿಸಿಎಲ್ ಕಂಪನಿಗಳ ವಾಟ್ಸಾಪ್ ಅಥವಾ ಮೊಬೈಲ್ ಆ್ಯಪ್ ಮೂಲಕ ಗ್ಯಾಸ್ ಬುಕ್ಕಿಂಗ್ ಮಾಡಬಹುದಾಗಿದೆ ಎಂದಿದ್ದಾರೆ.
ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ಗುಂಪು ಸೇರುವುದರಿಂದ ಏಜೆನ್ಸಿಗಳ ದೈನಂದಿನ ಕೆಲಸಕ್ಕೂ ಅಡಚಣೆ ಉಂಟಾಗುತ್ತಿದೆ. ಗ್ಯಾಸ್ ಏಜೆನ್ಸಿಗಳು ಸಿಲಿಂಡರ್ ಬುಕ್ಕಿಂಗ್ ಆದ್ಯತೆಯ ಮೇರೆಗೆ ಫಿಫೋ ಮಾದರಿಯಲ್ಲಿ (ಮೊದಲು ಬುಕ್ ಮಾಡಿದವರಿಗೆ ಮೊದಲು ಸರಬರಾಜು) ನೇರವಾಗಿ ಗ್ರಾಹಕರ ಮನೆಗೆ ತಲುಪಿಸಲಿದ್ದಾರೆ. ಹೀಗಾಗಿ ಗ್ರಾಹಕರು ಸುಳ್ಳು ವದಂತಿಗಳಿಗೆ ಕಿವಿಗೊಡದೆ ತಾಲೂಕು ಆಡಳಿತದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಕ್ರಮ ದಾಸ್ತಾನು ಮಾಡುವಂತಿಲ್ಲ
ಎಲ್.ಪಿ.ಜಿ, ಇಂಧನ ಅಕ್ರಮವಾಗಿ ದಾಸ್ತಾನು ಮಾಡುವುದು ಅಥವಾ ರೀಫಿಲ್ಲಿಂಗ್ ಮಾಡುವವರ ವಿರುದ್ಧ ಅವಶ್ಯಕ ವಸ್ತುಗಳ ಕಾಯ್ದೆ&1955, ಪೆಟ್ರೋಲಿಯಂ ಉತ್ಪನ್ನಗಳ (ಉತ್ಪಾದನೆ, ಸಂಗ್ರಹಣೆ ಮತ್ತು ಪೂರೈಕೆ) ಆದೇಶ&1999 ಹಾಗೂ ಎಲ್ಪಿಜಿ (ಸರಬರಾಜು ಮತ್ತು ವಿತರಣೆಯ ನಿಯಂತ್ರಣ) ಆದೇಶ&2000ರನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಗ್ಯಾಸ್ ಏಜೆನ್ಸಿಗಳ ಡೀಲರ್ಗಳು, ತಹಸೀಲ್ದಾರ ಕಚೇರಿ ಸಿಬ್ಬಂದಿ ಇದ್ದರು.