ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ಆಟೋ ಚಾಲಕರು ಮತ್ತು ಮಾಲೀಕರ ಸಂದಿಂದ ಚಿತ್ತಾಪುರದಲ್ಲಿ ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ನಾಗರಾಜ ಬುಗ್ಗಪ್ಪ, ಮುನ್ನೆಪ್ಪ ಫಿರೋಜ್, ಸೂರ್ಯಕಾಂತ ಇದ್ದರು.
- ಆಟೋ ಚಾಲಕರು ಮತ್ತು ಮಾಲೀಕರ ಸಂಘ ಆರೋಪ
- ಕ್ರಮಕ್ಕೆ ಮುಖ್ಯಾಧಿಕಾರಿಗೆ ಮನವಿ
ಚಿತ್ತಾಪುರ: ಬೀದಿ ವ್ಯಾಪರಿಗಳು ರಸ್ತೆಯಲ್ಲಿ ನಿಂತು ವ್ಯಾಪಾರ ಮಾಡುವುದರಿಂದ ಜನ ಸಾಮಾನ್ಯರು ಹಾಗೂ ಆಟೋ ಚಾಲಕರಿಗೆ ತೊಂದರೆ ಆಗುತ್ತಿದೆ. ಸುಗಮ ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಲಕ್ಷ್ಮೀ ಕಾಂತ ತಾಂಡೂರಕರ್ ಒತ್ತಾಯಿಸಿದರು.
ಈ ಕುರಿತು ಶನಿವಾರ ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರಿಗೆ ಮನವಿಪತ್ರ ಸಲ್ಲಿಸಿ, ಪಟ್ಟಣದ ಜನತಾ ವೃತ್ತದಿಂದ ಹೋಗುವ 4 ಮುಖ್ಯ ರಸ್ತೆಗಳಿದ್ದು, ಎಲ್ಲೆಡೆ ಬೀದಿ ವ್ಯಾಪಾರಿಗಳು ರಸ್ತೆ ಮೇಲೆ ಮತ್ತು ಬದಿ ಕೈಬಂಡಿ ಹಚ್ಚಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ವಾಹನ ಚಾಲಕರು ಹಾಗೂ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
ಮಾರುಕಟ್ಟೆಯಲ್ಲಿ 30 ಆಡಿ ರಸ್ತೆ ಇದ್ದು, ಅದರಲ್ಲಿ ಪಾದಚಾರಿಗಳಿಗೆ ಎರಡು ಕಡೆ 4 ಅಡಿ ಬಿಟ್ಟು ಉಳಿದ ಮಧ್ಯದಲ್ಲಿ ರಸ್ತೆ ಇರುತ್ತದೆ. ಇದರ ಬಗ್ಗೆ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ರಸ್ತೆ ಮೇಲೆ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿದರು.
ನಾಗರಾಜ ಬುಗ್ಗಪ್ಪ, ಮುನ್ನೆಪ್ಪ ಫಿರೋಜ್, ಸೂರ್ಯಕಾಂತ ಇತರರಿದ್ದರು.