ಸಿಲಿಕಾನ್ ಸಿಟಿಗೆ ವಾರಪೂರ್ತಿ ಮಳೆ
ಬೆಂಗಳೂರು: ಹಲವು ದಿನಗಳಿಂದ ಮಳೆ ಕೊರತೆ ಎದುರಿಸುತ್ತಿದ್ದ ಸಿಲಿಕಾನ್ ಸಿಟಿಗೆ ವಾರಪೂರ್ತಿ ಮಳೆಯಾಗುವ ಸಂಭವ ಇದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ, ಅರಬ್ಬಿ ಸಮುದ್ರದಲ್ಲಿ ತೇವಾಂಶ ಭರಿತ ಮೋಡಗಳಿರುವ ಕಾರಣ ದಕ್ಷಿಣ ಕರ್ನಾಟಕದಲ್ಲಿ ಮುಂಗಾರು ಸಕ್ರಿಯವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಸೆ.17ರಿಂದ 23ವರೆಗೆ ಮಳೆಯಾಗಲಿದೆ. ಇದೇ ಸಂದರ್ಭದಲ್ಲಿ ಮಳೆ ಜತೆಗೆ ಗುಡುಗು, ಬಿರುಗಾಳಿಯೂ ಜಾಸ್ತಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಹಿರಿಯ ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಮುಂಗಾರು ಮುಗಿಯಲು 2 ವಾರ ಬಾಕಿ ಇದೆ. ಬಳಿಕ ಹಿಂಗಾರು ಶುರುವಾಗಲಿದ್ದು, ಈ ಸಂದರ್ಭದಲ್ಲಿ ಸಿಲಿಕಾನ್ ಸಿಟಿಯಲ್ಲಿ ಉತ್ತಮ ಮಳೆಯಾಗಲಿದೆ. ಮಳೆ ಸುರಿದರೂ ನಗರದಲ್ಲಿ ವಾಡಿಕೆಗಿಂತ ಅಧಿಕವಾಗಿ ಉಷ್ಣಾಂಶ ಕಂಡುಬಂದಿದೆ. ವಾಡಿಕೆಯಂತೆ ಗರಿಷ್ಠ ತಾಪಮಾನದಲ್ಲಿ 28 ಡಿ.ಸೆ. ಉಷ್ಣಾಂಶ ದಾಖಲಾಗಬೇಕಿತ್ತು. ಆದರೆ, 31 ಡಿ.ಸೆ.ದಾಖಲಾಗುತ್ತಿದೆ ಎಂದರು.