Stop unnecessary walking in the sun. 
ರಾಜ್ಯ

ಬಿಸಿಲಲ್ಲಿ ಅನಗತ್ಯ ಓಡಾಟ ನಿಲ್ಲಿಸಿ

ಪಾತಪಾಳ್ಯ: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಹೊರಗೆ ಓಡಾಟ ನಿಲ್ಲಿಸುವುದು ಒಳಿತು ಎಂದು ವೈದ್ಯಾಧಿಕಾರಿ ಡಾ.ವಿನೋದ್​ಕುಮಾರ್​ ತಿಳಿಸಿದರು.
ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಬಿಸಿಲಿನ ತಾಪದಿಂದ ರಕ್ಷಣೆ ಕುರಿತು ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಆಶಾ ಕಾರ್ಯಕರ್ತೆಯರು ಹಳ್ಳಿಗಳಿಗೆ ಭೇಟಿ ನೀಡಿದಾಗ ಜನರಿಗೆ ಬಿಸಿಲಿನ ಬೇಗೆ ಬಗ್ಗೆ ತಿಳಿಸಿ ಎಚ್ಚರ ವಹಿಸಬೇಕೆಂದು ತಿಳಿಸಬೇಕು. ಸಾಧ್ಯವಾದಷ್ಟು ಮನೆಗಳಲ್ಲಿ ಇರುವಂತೆ ತಿಳಿಸಿ. ರೈತರು, ಕಟ್ಟಡ, ಇತರ ಕಾಮಗಾರಿ ನಡೆಸುವ ಕಾರ್ಮಿಕರು ಬೆಳಗ್ಗೆ 11ರವರೆಗೆ ಮತ್ತು ಸಂಜೆ 4ರ ನಂತರ ಕೆಲಸ ಮಾಡಬೇಕು. ಹೊರಗೆ ಹೋಗಬೇಕಾದ ಅನಿವಾರ್ಯತೆ ಇದ್ದರೆ ಕೊಡೆ, ಪಾದರಕ್ಷೆ, ಟವಲ್​, ತಂಪು ಕನ್ನಡಕ ಧರಿಸಬೇಕು. ಕಾಫಿ, ಟೀ, ಹೆಚ್ಚು ಸಕ್ಕರೆ ಅಂಶ ಇರುವ ಕಾಬೋರ್ನೇಟೆಡ್​ ಪಾನೀಯ, ಮಧ್ಯ, ಸಿಗರೇಟ್​ ಮತ್ತು ಬೀಡಿ ಸೇವನೆಯಿಂದ ದೂರವಿರಬೇಕು. ದೇಹದ ಉಷ್ಟಾಂಶ ನಿಯಂತ್ರಿಸಲು ಹೆಚ್ಚಾಗಿ ನೀರು, ಎಳೆನೀರು, ಮಜ್ಜಿಗೆ, ಹಣ್ಣಿನ ರಸ ಸೇವಿಸಬೇಕು. ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳನ್ನು ಬಳಸಬೇಕು. ತೆಳುಬಣ್ಣದ ಹತ್ತಿಯ ಬಟ್ಟೆಗಳನ್ನು ಮಾತ್ರ ಧರಿಸಬೇಕು. ತೀವ್ರ ಬಳಲಿಕೆಯ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದರು.
ಆಶಾ ಕಾರ್ಯಕರ್ತೆಯರಾದ ಲಕ್ಷಿ$್ಮ, ಎನ್​.ಛಾಯದೇವಿ, ಶ್ಯಾಮಲಮ್ಮ, ಪಿ.ಆರ್​.ಲಕ್ಷಿ$್ಮ ರೇಣುಕಾದೇವಿ, ಸುಭದ್ರಮ್ಮ, ಲಲಿತಮ್ಮ, ಅನಿತಾ, ಅಮರಾವತಿ, ಜ್ಯೋತಿ, ಶ್ರೀಶಾ, ಮಮತಾ ಇದ್ದರು.