- ಕರವೇ ಜಿಲ್ಲಾಧ್ಯಕ್ಷ ಭೀಮು ನಾಯಕ ಆಗ್ರಹ
- ಕೆಲವಡೆ ಮೂಲಭೂತ ಸೌಕರ್ಯಗಳೇ ಇಲ್ಲ
ಯಾದಗಿರಿ: ಜಿಲ್ಲೆಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಅಭಿವೃದ್ದಿ ಮತ್ತು ಬಿಲ್ಡಿಂಗ್ ಫಂಡ್ ಹೆಸರಿನಲ್ಲಿ ವಸೂಲಿ ಮಾಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಗೆ ಪತ್ರ ಬರೆದಿರುವ ಅವರು, ಶಿಕ್ಷಣ ನೀಡಬೇಕಾದ ಖಾಸಗಿ ಸಂಸ್ಥೆಗಳ ಶಾಲಾ ಕಾಲೇಜುಗಳು ಹಣ ವಸೂಲಿಗೆ ಮುಂದಾಗಿದ್ದು, ಮೂಲಸೌಕರ್ಯಗಳು ಮಾತ್ರ ಮರಿಚಿಕೆಯಾಗಿವೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಯಾವುದೇ ಸೌಕರ್ಯ ನೀಡದೇ ಕೇವಲ ಡೋನೆಷನ್ ಸೇರಿ ಇನ್ನಿತರ ಬಾಬ್ತುಗಳ ಹೆಸರಿನಲ್ಲಿ ಬರಿ ವಸೂಲಿ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಡೋನೇಶನ್ ಹಾವಳಿಯಿಂದಾಗಿ ಬಡ, ಹಿಂದುಳಿದವರ ಮಕ್ಕಳು ಉತ್ತಮ ಗಣುಮಟ್ಟದ ಶಿಕ್ಷಣ ಕನಸಿನ ಮಾತಾಗಿದೆ. ಬಹುತೇಕ ಸಂಸ್ಥೆಗಳ ಶಾಲಾ ಕಾಲೇಜುಗಳು ಮನೆ ಇಲ್ಲವೇ ರೂಮ್ಗಳಲ್ಲಿ ನಡೆಸುತ್ತಿದ್ದು, ಅನುಮತಿ ಪಡೆಯುವಾಗ ತೋರಿಸಿದ ಮಾಹಿತಿಗೂ ವಾಸ್ತವದ ಮಾಹಿತಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಇವರು ಕೇವಲ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ಸಂಸ್ಥೆಗಳು ಅನಧಿಕೃತವಾಗಿ ನಡೆಯುತ್ತಿದ್ದು, ಇನ್ನು ಕೆಲ ಸಂಸ್ಥೆಗಳು ಅರೆಬರೆ ಮೂಲಸೌಕರ್ಯ ಹೊಂದಿವೆ ಮತ್ತು ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಅನಧಿಕೃತವಾಗಿ ಕೋಚಿಂಗ್ ಸೆಂಟರ್ಗಳು ಬೇಸಿಗೆ ಶಿಬಿರಗಳ ಹೆಸರಿನಲ್ಲಿ ಮತ್ತದೆ ವಸೂಲಿ ಮಾಡುತ್ತಿವೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳು ಎಚ್ಚೆತ್ತು ಇಂತಹ ಅಕ್ರಮಗಳನ್ನು ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಕರವೇ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಮಲ್ಲು ಮಾಳಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ವಿಶ್ವಾರಾಜ ಪಾಟೀಲ್, ಭೀಮಾಶಂಕರ ಹತ್ತಿಕುಣಿ, ನಿಂಗಪ್ಪ ಗುಡಗುಡಿ, ಅಬ್ದುಲ್ ಚಿಗಾನೂರ, ವೆಂಕಟೇಶ ನಾಯಕ ಬೈರಿಮಡ್ಡಿ, ಶರಣಬಸಪ್ಪ ಯಲ್ಹೇರಿ, ಬಸವರಾಜ ಚೆನ್ನೂರ, ಅಂಬ್ರೇಷ್ ಕಟ್ಟಿಮನಿ, ರವಿ ನಾಯಕ, ಕಾಶೀನಾಥ ನಾನೇಕ, ಮರೆಪ್ಪ ಕಡ್ಡಿ, ರಮೇಶ ಡಿ. ನಾಯಕ ಸಹಿ ಹಾಕಿದ್ದಾರೆ.