- ಸಚಿವ ಪ್ರಿಯಾಂಕ್ಗೆ ಬಿಜೆಪಿ ತಾಲೂಕು ಅಧ್ಯಕ್ಷ ಸಜ್ಜನಶೆಟ್ಟಿ ಸಲಹೆ
- ಚಿತ್ತಾಪುರದ ಪ್ರಗತಿ ಕುಂಠಿತ
ಚಿತ್ತಾಪುರ: ಪುರಸಭೆಯ ವ್ಯಾಪ್ತಿಯ ವಾರ್ಡ್ಗಳಲ್ಲಿ ಕಾಮಗಾರಿಗಳು ಅಪೂರ್ಣವಾಗಿದ್ದು, ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಕ್ಷೇತ್ರದ ಶಾಸಕ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಜಪ ಬಿಟ್ಟು ತಾಲೂಕಿನ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಒತ್ತಾಯಿಸಿದರು.
ಒಳಚರಂಡಿ ಕಾಮಗಾರಿಗಾಗಿ 30 ಕೋಟಿ ರೂ. ಅನುದಾನ ಮಂಜೂರಾದರೂ ಕಾಮಗಾರಿ ಅಪೂರ್ಣವಾಗಿದೆ. ಇದೀಗ ಆಗಿರುವ ಕೆಲಸವೂ ಕಳಪೆಯಿಂದ ಕೂಡಿದೆ. ಎಲ್ಲೆಂದರಲ್ಲಿ ರಸ್ತೆ ಅಗೆದು ಬಿಟ್ಟು, ಸುಗಮ ಸಂಚರಕ್ಕೆ ಸಂಚಕಾರ ಬಂದಿದೆ. ಚರಂಡಿಗಳು ತುಂಬಿ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದೆ. ನಗರೋತ್ಥಾನ ಯೋಜನೆಯಡಿ ಸುಮಾರು 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಂಡಿಲ್ಲ. ಚಿತಾವಲಿ ಚೌಕ್ನಿಂದ ಕೋರ್ಟ್ವರೆಗಿನ ರಸ್ತೆ ಹಾಗೂ ಬಸವನಗರದ ಸೇತುವೆ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿದೆ. ಸ್ಟೇಷನ್ ತಾಂಡಾದಲ್ಲಿನ ಸಿಮೆಂಟ್ ರಸ್ತೆ ಕಾಮಗಾರಿ ಈವರೆಗೂ ಶುರುವಾಗಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಕೆಕೆಆರ್ಡಿಬಿಯ 45 ಲಕ್ಷ ರೂ. ಅನುದಾನದಲ್ಲಿ ಶಿವರಾವ ಪಾಟೀಲ್ ಮನೆಯಿಂದ ಭುವನೇಶ್ವರಿ ಚೌಕ್ ಮೂಲಕ ಜನತಾ ಚೌಕ್ವರೆಗಿನ ರಸ್ತೆ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಅರ್ಧಕ್ಕೆ ನಿಂತಿದೆ. 2023-24ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ 2.32 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. 2025-26ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ 2.37 ಕೋಟಿ ರೂ. ಕ್ರಿಯಾಯೋಜನೆ ಅನುಮೋದನೆಗೊಂಡಿದೆ. ಆದರೆ ಅನುದಾನ ಬಿಡುಗಡೆಯಾಗಿಲ್ಲ. 2026-27ನೇ ಸಾಲಿನ 16ನೇ ಹಣಕಾಸು ಯೋಜನೆಯಡಿ 4ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಇದುವರೆಗೆ ಕ್ರಿಯಾಯೋಜನೆ ರೂಪಿಸಿಲ್ಲ. ತಾಲೂಕಿನಾದ್ಯಂತ ಅಭಿವೃದ್ಧಿ ಹೆಸರಿನಲ್ಲಿ ಅನುದಾನ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ದೀಪಕ್ ಹೊನ್ಸೂರಕರ್, ನಾಗರಾಜ ಭಂಕಲಗಿ, ರಮೇಶ ಬೊಮ್ಮನಹಳ್ಳಿ, ಶ್ಯಾಮ ಮೇಧಾ, ಪ್ರಭು ಗಂಗಾಣಿ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಸಂಗಮೇಶ ಪಾಟೀಲ್, ವಿಶ್ವನಾಥ ಹಾಬಾಳ ಇದ್ದರು.