ಶಿವಾಜಿ ರಾವ್ ಬೈರೋಜಿ ಅವರ ಮನೆಗೆ ಬಿ.ವೈ. ವಿಜಯೇಂದ್ರಭೇಟಿ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ದೌರ್ಜನ್ಯ ಪದೇಪದೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು.
ಹಾವೇರಿ ಜಿಲ್ಲೆ ರೆಟ್ಟಿಹಳ್ಳಿಯಲ್ಲಿ ಇತ್ತೀಚೆಗೆ ಹತ್ಯೆಯಾದ ಶಿವಾಜಿ ರಾವ್ ಬೈರೋಜಿ ಅವರ ಮನೆಗೆ ಸೋಮವಾರ ಭೇಟಿ ನೀಡಿ ಪಾಲಕರಿಗೆ ಸಾಂತ್ವಾನ ಹೇಳಿದರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ನರೇಗಲ್ನಲ್ಲಿ ಹೋರಿ ಬೆದರಿಸುವ ವೇಳೆ ಪಟಾಕಿ ಹೊಡೆದರೆಂಬ ಕಾರಣಕ್ಕೆ ಲೋಹಿತ್ ಕುರುಬರ ಮತ್ತು ಅವರ ಸಂಗಡಿಗರ ಮೇಲೆ ಹಲ್ಲೆ ಮಾಡಿದ್ದರು. ಇದೀಗ ಕಳೆದ 60 ವರ್ಷಗಳಿಂದ ಪೆಟ್ಟಿಗೆ ಅಂಗಡಿ ನಡೆಸುತ್ತಿದ್ದ ಶಿವಾಜಿ ರಾವ್ ಅವರಿಗೆ 100 ರೂ. ಕೊಟ್ಟು 500 ರೂ. ಕೊಟ್ಟಿದ್ದಾಗಿ ಹೇಳಿ ಜಗಳ ಮಾಡಿ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದ್ದಾರೆ. ಇದು ವೈಯಕ್ತಿಕ ಘಟನೆ ಅಲ್ಲ. ಕೊಲೆಯ ಹಿಂದೆ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎಂದು ಆಕ್ಷೇಪಿಸಿದರು.
ಅಮಾಯಕ ಪ್ರಾಣ ಕಳಕೊಂಡ ಗಂಭೀರ ಘಟನೆ ನಡೆದಿದೆ. ಯಾವುದೇ ಸಚಿವರು ನರೇಗಲ್ಗೆ ಭೇಟಿ ಕೊಟ್ಟು ಆ ಕುಟುಂಬವನ್ನು ಮಾತನಾಡಿಸಿಲ್ಲ. ಯಲ್ಲಾಪುರದಲ್ಲಿ ಲವ್ ಜಿಹಾದ್ ಕಾರಣಕ್ಕೆ ದಲಿತ ಮಹಿಳೆಯ ಬರ್ಬರ ಹತ್ಯೆ ಆಗಿದೆ.
ಅಲ್ಲಿಯೂ ಯಾವನೇ ಸಚಿವ ಹೋಗಿಲ್ಲ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಿಂದ ಇಂಥ ಮತೀಯ ಶಕ್ತಿಗಳಿಗೆ ಧೈರ್ಯ ಬಂದಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಮೆರಿಕ, ರಷ್ಯಾ ಬಗ್ಗೆ ಮಾತನಾಡುತ್ತಾರೆ. ತಾಕತ್ತಿದ್ದರೆ ಇಂಥ ಘಟನೆಗಳಿಗೆ ಕಾರಣಕರ್ತರನ್ನು ಹೆಡೆಮುರಿ ಕಟ್ಟುವ ಕೆಲಸ ಮಾಡಿ ಎಂದು ಸವಾಲು ಹಾಕಿದರು.