DK Shivakumar 
ರಾಜ್ಯ

ಕಲ್ಲು ಕ್ವಾರಿ ದುರಂತ; ವರದಿ ಬಂದ ಬಳಿಕ ಕಠಿಣ ಕ್ರಮ, ಲೀಗಲ್ ಅಥವಾ ಅಕ್ರಮ ಪರಿಶೀಲನೆ: ಡಿಕೆ ಶಿವಕುಮಾರ್

ಬೆಂಗಳೂರು: ಸಮೀಪ ಮಾಗಡಿ ರಸ್ತೆಯ ಕಲ್ಲು ಕ್ವಾರಿಯಲ್ಲಿ ಸಂಭವಿಸಿರುವ ದುರಂತದಲ್ಲಿ 6ರಿಂದ 7 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಮೃತದೇಹಗಳು ಪತ್ತೆಯಾಗಿದ್ದು, ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್( DK Shivakumar) ತಿಳಿಸಿದ್ದಾರೆ.
"ಇದುವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಬ್ಲಾಸ್ಟ್ ಆಗಿಲ್ಲ ಎಂದು ಗೊತ್ತಾಗಿದೆ. ಇಂದು ಮಧ್ಯಾಹ್ನ ಈ ಘಟನೆ ಕುರಿತು ಸಂಪೂರ್ಣ ವರದಿ ತರಿಸಿಕೊಳ್ಳುತ್ತೇನೆ," ಎಂದು ಅವರು ಹೇಳಿದರು.
ಕಲ್ಲು ಕ್ವಾರಿ ಕಾನೂನುಬದ್ಧವಾಗಿತ್ತೇ ಅಥವಾ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿತ್ತೇ ಎಂಬುದನ್ನು ಪರಿಶೀಲಿಸಬೇಕಿದೆ. ಈ ಬಗ್ಗೆ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
"ನಿಯಮಗಳನ್ನು ಪಾಲಿಸಲೇಬೇಕು. ನಮ್ಮ ಶಾಸಕರು ಕೂಡ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ವರದಿ ತರಿಸಿಕೊಂಡು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ," ಪರಿಹಾರ ಘೋಷಣೆ ಮಾಡುವುದರಿಂದ ಮೃತಪಟ್ಟವರು ಮರಳಿ ಬರುವುದಿಲ್ಲ. ಆದ್ದರಿಂದ ದುರಂತಕ್ಕೆ ಕಾರಣವಾದ ಅಂಶಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಮುಖ್ಯ ಎಂದು ಸಿಎಂ ಹೇಳಿದ್ದಾರೆ.

ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಿ – ಎಸ್.ಟಿ. ಸೋಮಶೇಖರ್

ಬೆಂಗಳೂರು: ಕಲ್ಲು ಕ್ವಾರಿ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಕೇವಲ ಪರಿಹಾರ ನೀಡುವುದಷ್ಟೇ ಸಾಲದು. ದುರಂತಕ್ಕೆ ಕಾರಣರಾದ ಎಲ್ಲರ ವಿರುದ್ಧ ಎ1, ಎ2, ಎ3 ಆರೋಪಿಗಳಂತೆ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಒತ್ತಾಯಿಸಿದ್ದಾರೆ.
"ಈ ಘಟನೆ ನನ್ನ ಕ್ಷೇತ್ರದಲ್ಲಿ ನಡೆದಿದೆ. ಇಂದು ಬೆಳಗ್ಗೆ ಸುಮಾರು 7 ಗಂಟೆಗೆ 10 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಮೇಲ್ಭಾಗದಿಂದ ಬಂಡೆ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ," ಎಂದು ಅವರು ಹೇಳಿದರು.

'ಮೇಲ್ಭಾಗದಲ್ಲಿ ಬ್ಲಾಸ್ಟ್‌ಗೆ ಸಿದ್ಧತೆ'

"ಕಾರ್ಮಿಕರು ಕೆಲಸ ಮಾಡುತ್ತಿದ್ದ ಸ್ಥಳದ ಮೇಲ್ಭಾಗದಲ್ಲಿ ಮತ್ತೊಬ್ಬರ ಕ್ವಾರಿ ಇದೆ. ಅಲ್ಲಿ ಗುಳಿ ತೋಡಿ ಸ್ಫೋಟ ನಡೆಸಲು ಸಿದ್ಧತೆ ನಡೆಯುತ್ತಿತ್ತು. ಇದೇ ವೇಳೆ ಬಂಡೆ ಕಳಚಿ ಕೆಳಗೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ," ಎಂದು ಸೋಮಶೇಖರ್ ಆರೋಪಿಸಿದರು.

'ಅಕ್ರಮ ಚಟುವಟಿಕೆಯಲ್ಲಿ ಅಧಿಕಾರಿಗಳೂ ಭಾಗಿಯಾಗಿದ್ದಾರೆ'

"ಇದೆಲ್ಲವೂ ಸಂಪೂರ್ಣ ಅಕ್ರಮವಾಗಿ ನಡೆಯುತ್ತಿದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ," ಎಂದು ಅವರು ಆರೋಪಿಸಿದರು. ಈ ಹಿಂದೆಯೇ ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದೆ. ಕ್ವಾರಿ ಮಾಲೀಕರೊಂದಿಗೆ ಸಭೆ ನಡೆಸಿ ಕಾನೂನುಬದ್ಧವಾಗಿ ಸ್ಫೋಟ ನಡೆಸುವಂತೆ ಎಚ್ಚರಿಕೆ ನೀಡಿದ್ದೆ. ಆದರೂ ಯಾವುದೇ ಬದಲಾವಣೆ ಆಗಿಲ್ಲ ಎಂದರು.

ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಿ

"ಕ್ರಷರ್ ನಡೆಸುವವರು ಆರ್ಥಿಕವಾಗಿ ಪ್ರಬಲರಾಗಿದ್ದಾರೆ. ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕರ ಕುಟುಂಬಕ್ಕೂ ತಲಾ ₹1 ಕೋಟಿ ಪರಿಹಾರ ನೀಡಬೇಕು. ಕೇವಲ ಪರಿಹಾರ ಘೋಷಿಸುವುದರಿಂದ ಸಾಲದು. ಸಂಬಂಧಪಟ್ಟವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು," ಎಂದು ಎಸ್.ಟಿ. ಸೋಮಶೇಖರ್ ಒತ್ತಾಯಿಸಿದರು.