ಕಲ್ಲಿನ ಕ್ವಾರಿಯಲ್ಲಿ ಕಲ್ಲು ಬಂಡೆ ಕುಸಿದ Photo
- ಕಲ್ಲುಕ್ವಾರಿ ದುರಂತ 7 ಕಾರ್ಮಿಕರ ಸಾವು ಪ್ರಕರಣ
- ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ ಸುಮೋಟೊ ಪ್ರಕರಣ
ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕು ತಾವರೆಕರೆ ಹೋಬಳಿ ಸಮೀಪದ ಕಲ್ಲಿನ ಕ್ವಾರಿಯಲ್ಲಿ ಕಲ್ಲು ಬಂಡೆ ಕುಸಿದು 7 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಪ್ರಕರಣದ ನಾಪತ್ತೆಯಾಗಿದ್ದ ಇಬ್ಬರು ಕ್ವಾರಿ ಮಾಲೀಕರ ಸುಳಿವು ಇಲ್ಲದಂತಾಗಿದೆ.
ಆರೋಪಿಗಳ ಬಂಧನಕ್ಕೆ ತಾವರೆಕರೆ ಪೊಲೀಸರು ಎರಡು ವಿಶೇಷ ತಂಡ ರಚನೆ ಮಾಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ವಾರ ಕಳೆದರೂ ಆರೋಪಿಗಳಿಬ್ಬರು ಪತ್ತೆ ಇಲ್ಲ. ಕಾವೇರಿ ಸ್ಟೋನ್ ಕನ್‌ಸ್ಟ್ರಕ್ಷನ ಕ್ವಾರಿ ಮಾಲೀಕ ಉದಯಶಂಕರ್ ಹಾಗೂ ಬಸವೇಶ್ವರ ಕ್ವಾರಿ ಮಾಲೀಕ ಆನಂದ್‌ಸ್ವಾಮಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಬರ್ ಜೋನ್ ನಿಯಮ ಉಲ್ಲಂಸಿ ಕಲ್ಲಿನ ಕ್ವಾರಿ ನಡೆಸುತ್ತಿದ್ದರು. ಕ್ವಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸುರಕ್ಷತೆ ಗಮನಿಸಿದೆ ಕೆಲಸ ನೀಡಲಾಗಿತ್ತು.
ಕಾವೇರಿ ಕನ್‌ಸ್ಟ್ರಕ್ಷನ್ ಕ್ವಾರಿಯಲ್ಲಿ ಕಲ್ಲು ಬಂಡೆ ಕುಸಿಯಲಿದೆ ಎಂಬ ಮಾಹಿತಿ ಗೊತ್ತಿದ್ದರು ಕಾರ್ಮಿಕರಿಗೆ ಕೆಲಸ ನೀಡಲಾಗಿತ್ತು. ಈ ದುರಂತದಿಂದ ರಾಜ್ಯ ಸೇರಿ ಹೊರ ರಾಜ್ಯದ 7 ಮಂದಿ ಕಾರ್ಮಿಕರು ಮೃತಪಟ್ಟಿದ್ದರು. ಐವರು ಗಾಯಗೊಂಡಿದ್ದರು. ಕ್ವಾರಿಯಲ್ಲಿ ದುರಂತ ಸಂಭವಿಸಿರುವ ಮಾಹಿತಿ ತಿಳಿಯುತ್ತಿದ್ದಂತೆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಲೀಜ್‌ಗೆ ನೀಡಿದ್ದ ಕ್ವಾರಿ:
ಬಸವೇಶ್ವರ ಕ್ವಾರಿ ಮಾಲೀಕ ಆನಂದ್‌ಸ್ವಾಮಿ ಎಂಬುವರು ಸಾಯಿರಾಮ್ ಕ್ರಷರ್ ಮಾಲೀಕ ಪಾಂಡುರಂಗ್ ಎಂಬುವರಿಗೆ ಲೀಜ್‌ಗೆ ನೀಡಿದ್ದನು. ಅಲ್ಲದೇ ಅದೇ ಕ್ವಾರಿ ಮೇಲ್ವಿಚಾರಕನಾಗಿದ್ದ ಎನ್.ಲೋಕೇಶ್ ಹಾಗೂ ಪಾಂಡುರಂಗ ಹಾಗೂ ಕಾವೇರಿ ಸ್ಟೋನ್ ಕನ್‌ಸ್ಟ್ರಕ್ಷನ್ ಕ್ವಾರಿ ಮೇಲ್ವಿಚಾರಕ ರಾಜು ಸೇರಿ ಮೂವರ ಬಂಧನ ಹೊರತು ಪಡಿಸಿ ಇದುವರೆಗೆ ಯಾರನ್ನು ಬಂಧನ ಮಾಡಿಲ್ಲ. ಈ ಬಗ್ಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದರುಂತ ನಡೆದ ಎರಡು ಕ್ವಾರಿಗಳ ಪರವಾನಗಿ ಅಮಾನತುಗೊಳಿಸಿದ್ದಾರೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ನಡೆಯುತ್ತಿದ್ದ 54 ಕ್ವಾರಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಿ ಕೈ ತೊಳೆದುಕೊಂಡಿದ್ದಾರೆ.
ಸರ್ಕಾರಕ್ಕೆ ವರದಿ ಕೇಳಿದ ಆಯೋಗ
ಕಲ್ಲು ಕ್ವಾರಿಯಲ್ಲಿ ಬೃಹತ್ ಗ್ರಾನೈಟ್ ಬಂಡೆ ಉರುಳಿ ಬಿದ್ದ ಪರಿಣಾಮ 7 ಮಂದಿ ಕಾರ್ಮಿಕರು ಸಾವನ್ನಪ್ಪಿದ ಮತ್ತು ಇತರ 5 ಮಂದಿ ಗಾಯಗೊಂಡ ಪ್ರಕರಣದ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಎರಡು ವಾರಗಳಲ್ಲಿ ವಿವರವಾದ ವರದಿ ನೀಡುವಂತೆ ಆಯೋಗವು ಕರ್ನಾಟಕ ಮುಖ್ಯ ಕಾರ್ಯದರ್ಶಿ ಅವರಿಗೆ ನೋಟಿಸ್ ಜಾರಿ ಮಾಡಿದೆ.
"
ಕ್ರಷರ್ ಮಾಲೀಕರ ನಿರ್ಲಕ್ಷೃದಿಂದ ಈ ದುರಂತ ಸಂಭವಿಸಿದೆ. ಗಣಿ ಇಲಾಖೆ ನಿಯಮ ಉಲ್ಲಂಘನೆ ಆಗಿರುವುದು ಕಂಡು ಬಂದಿದ್ದು. ಎರಡೂ ಕ್ರಷರ್ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
— - ಕೃಷ್ಣವೇಣಿ | ಉಪನಿರ್ದೇಶಕಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ