ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ( Chhatrapati Shivaji ) ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು ತೂರಾಟ 
ರಾಜ್ಯ

ಛತ್ರಪತಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು ತೂರಾಟ: ಎಸ್ಪಿ ಸಿದ್ಧಾರ್ಥ್​ ಗೋಯಲ್​ಗೂ ಬಿತ್ತು ಕಲ್ಲೇಟು! Chhatrapati Shivaji

ಪ್ರಮುಖ ಮುಖ್ಯಾಂಶಗಳು

  • ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಕಲ್ಲು ತೂರಾಟ
  • ಭವ್ಯ ಮೆರವಣಿಗೆ ವೇಳೆ ಕೆಲ ಕಿಡಿಗೇಡಿಗಳ ಕಿತಾಪತಿಯಿಂದ ನಡೆದ ಕಲ್ಲು ತೂರಾಟ
  • ಗುರುವಾರ ರಾತ್ರಿ ಬಾಗಲಕೋಟೆಯ ಕಿಲ್ಲಾದ ಪಂಕಾ ಮಸೀದಿ ಬಳಿ ನಡೆದ ಘಟನೆ
ಬಾಗಲಕೋಟೆ: ಛತ್ರಪತಿ ಶಿವಾಜಿ ( Chhatrapati Shivaji ) ಮಹಾರಾಜರ ಜಯಂತಿ ಅಂಗವಾಗಿ ಸಮುದಾಯದಿಂದ ಹಮ್ಮಿಕೊಂಡಿದ್ದ ಭವ್ಯ ಮೆರವಣಿಗೆ ವೇಳೆ ಕೆಲ ಕಿಡಿಗೇಡಿಗಳ ಕಿತಾಪತಿಯಿಂದ ಕಲ್ಲು ತೂರಾಟ ನಡೆದು, ಎಸ್ಪಿ ಸಿದ್ಧಾರ್ಥ್​ ಗೋಯಲ್ ಸೇರಿದಂತೆ ಕೆಲವರಿಗೆ ಕಲ್ಲು ಬಡಿದು ಸಣ್ಣಪುಟ್ಟ ಗಾಯ ಆಗಿರುವ ಘಟನೆ ಗುರುವಾರ ರಾತ್ರಿ ಬಾಗಲಕೋಟೆಯ ಕಿಲ್ಲಾದ ಪಂಕಾ ಮಸೀದಿ ಬಳಿ ನಡೆದಿದೆ.
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಬೆಳಗ್ಗೆ ಜಿಲ್ಲಾಡಳಿತದಿಂದ ಅದ್ದೂರಿಯಾಗಿ ನಡೆಸಲಾಗಿತ್ತು. ಮಧ್ಯಾಹ್ನದ ಬಳಿಕ ಸಮುದಾಯದಿಂದ ಶಿವಾಜಿ ಮಹಾರಾಜರ ಭವ್ಯ ಮೆರವಣಿಗೆ ಸಾಗಿತ್ತು. ಈ ವೇಳೆ ರಾತ್ರಿ ಮೆರವಣಿಗೆ ಪಂಕಾ ಮಸೀದಿ ಮಾರ್ಗದಲ್ಲಿ ಸಾಗುತ್ತಿತ್ತು. ಇದೇ ಸಂದರ್ಭದಲ್ಲಿ ಮಸೀದಿಯಲ್ಲೂ ಸಹ ಪ್ರಾರ್ಥನೆ ನಡೆದಿತ್ತು. ಇದೇ ಪರಿಸ್ಥಿತಿಯನ್ನ ಬಂಡವಾಳ ಮಾಡಿಕೊಂಡ ಕೆಲ ಕಿಡಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಈ ವೇಳೆ ನಡೆದ ಕಲ್ಲು ತೂರಾಟದಲ್ಲಿ ಕರ್ತವ್ಯದಲ್ಲಿ ಇದ್ದ ಎಸ್ಪಿ ಸಿದ್ದಾರ್ಥ ಗೋಯಲ್ ಅವರ ಕುತ್ತಿಗೆ ಬಳಿ ತರುಚಿ ಅವರ ಸಮವಸ್ತ್ರದ ಮೇಲೆ ರಕ್ತದ ಕಲೆ ಆಗಿರುವ ವಿಡಿಯೋ ಮತ್ತು ಫೋಟೋಗಳು ಹರಿದಾಡುತ್ತಿವೆ. ಪರಿಸ್ಥಿತಿ ಕೈಮೀರುವ ಮುನ್ನವೇ ಎಸ್ಪಿ ಗೋಯಲ್ ನೇತೃತ್ವದಲ್ಲಿ ಪೊಲೀಸರ ತಂಡ ಪರಿಸ್ಥಿತಿ ತಹಬದಿಗೆ ತಂದಿದ್ದು, ರಾತ್ರಿ 11 ಗಂಟೆ ವೇಳೆಗೆ ತಿಳಿಯಾಗಿ, ಪೊಲೀಸ್ ಕಂಟ್ರೋಲ್​ನಲ್ಲಿ ಇದೆ. ಸ್ಥಳದಲ್ಲಿ ಹೆಚ್ಚಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಘಟನೆಯಲ್ಲಿ ಯಾವುದೇ ಅನಾಹುತ ಆಗಿಲ್ಲ. ಕಲ್ಲು ತೂರಾಟದಲ್ಲಿ ತಮಗೆ ಯಾವುದೇ ತೊಂದರೆ ಆಗಿಲ್ಲ. ಸಣ್ಣದಾಗಿ ತರಚಿದೆ ಅಷ್ಟೆ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ಸ್ಥಳದಲ್ಲಿ ಸಹಜ ಪರಿಸ್ಥಿತಿ ಇದೆ ಎಂದು ಎಸ್ಪಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.