ಜಲ್ಲಿ ಕ್ರಷರ್ ಮಾಲೀಕರ ಪ್ರತಿಭಟನೆ 
ರಾಜ್ಯ

ಜಲ್ಲಿ ಕ್ರಷರ್, ಎಂ ಸ್ಯಾಂಡ್ ಘಟಕ ಸ್ಥಗಿತ: ರಾಜ್ಯಾದ್ಯಂತ ಜಲ್ಲಿ ಕ್ರಷರ್ ಮಾಲೀಕರ ಪ್ರತಿಭಟನೆ- Stone crusher owners protest

ಬೆಂಗಳೂರು: ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ 2 ಕಡೆಗಳಲ್ಲಿ ರಾಜಧನ ಸಂಗ್ರಹ ಕೈಬಿಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ ಶುಕ್ರವಾರದಿಂದ ರಾಜ್ಯಾದ್ಯಂತ ಕಲ್ಲು ಕ್ವಾರಿ, ಜಲ್ಲಿ ಕ್ರಷರ್ ಹಾಗೂ ಎಂ.ಸ್ಯಾಂಡ್ ಘಟಕಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸಲಿದೆ.
ರಾಜಧನ ಸಂಗ್ರಹ ಕುರಿತು ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿ ಅದನ್ನು ರಾಜ್ಯಪತ್ರದಲ್ಲಿ ಪ್ರಕಟಿಸುವವರೆಗೆ ಹೋರಾಟ ಹಿಂಪಡೆಯುವುದಿಲ್ಲ. ನಮ್ಮ ಹೋರಾಟಕ್ಕೆ ಎಲ್ಲ ಜಿಲ್ಲಾ ಘಟಕಗಳು ಬೆಂಬಲ ಕೊಟ್ಟಿವೆ. ನಿರ್ಮಾಣ ಕಾಮಗಾರಿಗಳಿಗೆ ಬೇಕಾಗಿರುವ ಜಲ್ಲಿ, ಎಂ.ಸ್ಯಾಂಡ್ ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ಎಂದು ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಡಿ. ಸಿದ್ದರಾಜು ಹೇಳಿದರು.
ಹೊರ ರಾಜ್ಯಗಳಿಂದ ಕಲ್ಲುಗಣಿ ಸಂಪನ್ಮೂಲ ರಾಜ್ಯಕ್ಕೆ ಬರದಂತೆ ಚೆಕ್ ಪೋಸ್ಟ್‌ಗಳಲ್ಲಿ ತಡೆಯಲು ಕ್ರಮ ತೆಗೆದುಕೊಳ್ಳುತ್ತೇವೆ. ರಾಜಧನ ಪಾವತಿಯಾಗಿದ್ದರೂ ಮತ್ತೆ ಗಣಿಗುತ್ತಿಗೆದಾರರಿಂದ ರಾಜಧನ ವಸೂಲಿ ಮಾಡುವುದು ಸರಿಯಲ್ಲ. ಕಲ್ಲು ಗಣಿಗಾರಿಕೆ ವಲಯದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರುವ ಕ್ರಮಕ್ಕೆ ನಮ್ಮ ವಿರೋಧವಿದೆ ಎಂದರು.
ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವ ಸಣ್ಣ ಹಾಗೂ ಸ್ಥಳೀಯ ಉದ್ಯಮಿಗಳಿಗೆ ತೊಂದರೆಯಾಗುವ ರೀತಿಯಲ್ಲಿ ನೀತಿಗಳು ರೂಪುಗೊಳ್ಳುತ್ತಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿನ ಆಡಳಿತಾತ್ಮಕ ಸಮಸ್ಯೆಗಳಿಂದ ಕಲ್ಲು ಗಣಿಗಾರಿಕೆ ವಲಯವು ಸಂಕಷ್ಟಕ್ಕೆ ಸಿಲುಕಿದೆ ಎಂದು ಸಂಘದ ಉಪಾಧ್ಯಕ್ಷರಾದ ವಾಗೀಶ್ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷರಾದ ಅಬ್ದುಲ್ ಮಜೀದ್, ಮನೋಜ್ ಶೆಟ್ಟರ್ ಸೇರಿ ಮತ್ತಿತರರಿದ್ದರು.