ಗದಗ: ಜಗತ್ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಗದಗ ಜಿಲ್ಲೆಯ ಲಕ್ಕುಂಡಿ(Lakkundi) ಗ್ರಾಮದಲ್ಲಿ ಭಾರತೀಯ ಪುರಾತತ್ವ ಇಲಾಖೆ (ASI) ನಡೆಸುತ್ತಿರುವ ಉತ್ಖನನ ಕಾರ್ಯವು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಹಂತದಲ್ಲಿ ಅತ್ಯಂತ ಅಪರೂಪದ ಶಿಲಾಯುಗದ ಆಯುಧ ಮಾದರಿಯ ಕಲ್ಲು ಪತ್ತೆಯಾಗಿದ್ದು, ಲಕ್ಕುಂಡಿಯ ಇತಿಹಾಸವು ನಮಗೆ ತಿಳಿದಿರುವುದಕ್ಕಿಂತಲೂ ಹೆಚ್ಚು ಪುರಾತನವಾದುದು ಎಂಬ ಸುಳಿವು ನೀಡುತ್ತಿದೆ.
ಪತ್ತೆಯಾದ ಆಯುಧದ ವಿಶೇಷತೆಗಳೇನು?
ಉತ್ಖನನ ಜಾಗದಲ್ಲಿ ಮಣ್ಣು ತೆಗೆಯುವಾಗ ಅಂಡಾಕಾರದ ವಿಶಿಷ್ಟ ಕಲ್ಲೊಂದು ಪತ್ತೆಯಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ತಜ್ಞರಿಗೆ ಇದು ಕೇವಲ ಕಲ್ಲಲ್ಲ, ಬದಲಾಗಿ ಶಿಲಾಯುಗದಲ್ಲಿ ಮಾನವ ಬಳಸುತ್ತಿದ್ದ ಕೊಡಲಿ ಆಕಾರದ ಆಯುಧ ಎಂಬುದು ದೃಢಪಟ್ಟಿದೆ. ಇದು ಅಂಡಾಕಾರದಲ್ಲಿದ್ದು (Oval shape), ಒಂದು ಭಾಗ ಅತ್ಯಂತ ಮೊನಚಾಗಿದೆ.ಈ ರೀತಿಯ ಆಯುಧಗಳನ್ನು ಸಾವಿರಾರು ವರ್ಷಗಳ ಹಿಂದೆ ಬೇಟೆ ಆಡಲು ಅಥವಾ ವಸ್ತುಗಳನ್ನು ಕತ್ತರಿಸಲು ಶಿಲಾಯುಗದ ಮಾನವ ಬಳಸುತ್ತಿದ್ದ ಎನ್ನಲಾಗಿದೆ.
ಅಧಿಕಾರಿಗಳಿಂದ ಸುರಕ್ಷಿತ ವಶ
ಈ ಅಮೂಲ್ಯ ವಸ್ತು ಪತ್ತೆಯಾಗುತ್ತಿದ್ದಂತೆ ಉತ್ಖನನದ ಮೇಲ್ವಿಚಾರಕರು ತಕ್ಷಣವೇ ಕಾರ್ಯಪ್ರವೃತ್ತರಾದರು. ಆಯುಧ ಮಾದರಿಯ ಕಲ್ಲನ್ನು ಹಾನಿಯಾಗದಂತೆ ರಕ್ಷಿಸಿ, ಅದನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಹಾಕಿ ಸುರಕ್ಷಿತವಾಗಿಡಲಾಗಿದೆ. ಈ ವಸ್ತುವಿಗೆ ಪ್ರತ್ಯೇಕ ಟ್ಯಾಗ್ ಅಳವಡಿಸಲಾಗಿದ್ದು, ಅದು ಪತ್ತೆಯಾದ ಆಳ, ಜಾಗ ಮತ್ತು ಸಮಯದ ವಿವರಗಳನ್ನು ದಾಖಲಿಸಲಾಗಿದೆ. ಮುಂದಿನ ಸಂಶೋಧನೆಗಾಗಿ ಇದನ್ನು ಲ್ಯಾಬ್‌ಗೆ ಕಳುಹಿಸುವ ಸಾಧ್ಯತೆ ಇದೆ.
ಬಗೆದಷ್ಟು ಹೊರಬರುತ್ತಿವೆ ವಿಸ್ಮಯಗಳು
ಲಕ್ಕುಂಡಿಯ ಈ ಭಾಗದಲ್ಲಿ ಉತ್ಖನನ ಮುಂದುವರಿದಂತೆಲ್ಲಾ ಭೂಮಿಯ ಒಡಲಿಂದ ವಿವಿಧ ಆಕೃತಿಯ ಕಲ್ಲುಗಳು, ಮಣ್ಣಿನ ಪಾತ್ರೆಯ ಅವಶೇಷಗಳು ಪತ್ತೆಯಾಗುತ್ತಿವೆ. ನಾಲ್ಕನೇ ದಿನ ಪತ್ತೆಯಾದ ಈ ಆಯುಧವು ಲಕ್ಕುಂಡಿಯಲ್ಲಿ ಕೇವಲ ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸ ಮಾತ್ರವಲ್ಲದೆ, ಅದಕ್ಕೂ ಹಿಂದಿನ ಪ್ರಾಚೀನ ಮಾನವನ ನಾಗರಿಕತೆ ಇತ್ತೇ ಎಂಬ ಕುತೂಹಲವನ್ನು ಕೆರಳಿಸಿದೆ. ಲಕ್ಕುಂಡಿಯ ಉತ್ಖನನ ಕಾರ್ಯವು ಕರ್ನಾಟಕದ ಇತಿಹಾಸಕ್ಕೆ ಹೊಸ ಆಯಾಮ ನೀಡುವ ಮುನ್ಸೂಚನೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಏನೇನು ಅದ್ಭುತಗಳು ಪತ್ತೆಯಾಗಲಿವೆ ಎಂಬ ಕೌತುಕ ಮನೆಮಾಡಿದೆ.