ತೂಬಗೆರೆ ಹೋಬಳಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರೈತರ ಸಬಲೀಕರಣಕ್ಕೆ ತರಬೇತಿ ಮತ್ತು ಉಚಿತ ಬೀಜ ವಿತರಿಸಲಾಯಿತು. ಡಾ. ಹನುಮಂತರಾಯ, ಡಾ. ಜಿ. ಕೆ. ನಿಂಗರಾಜು, ಡಾ. ಎ. ಬಿ. ನಾರಾಯಣರೆಡ್ಡಿ, ಡಾ. ಜಿ. ಕೆ. ನಿಂಗರಾಜು, ಪ್ರಗತಿಪರ ರೈತ ಲ್ಮ ನಾರಾಯಣಪ್ಪ, ಇತರರು ಇದ್ದರು.
ತೂಬಗೆರೆ : ರೈತರಿಗೆ ನೀಡಲಾದ ತಂತ್ರಜ್ಞಾನ ಮತ್ತು ಕೃಷಿ ಪರಿಕರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೆಚ್ಚಿನ ಆದಾಯ ಮತ್ತು ಕೃಷಿಯಲ್ಲಿ ಸುಸ್ಥಿರತೆ ಕಂಡುಕೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಹನುಮಂತರಾಯ ಕರೆ ನೀಡಿದರು.
ಬೆಂಗಳೂರು ಕೃಷಿ ವಿ.ವಿ ಸಹಯೋಹದಲ್ಲಿ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಮಂಗಳವಾರ ಹಮ್ಮಿಕೊಂಡಿದ್ದ ರೈತರ ಸಬಲೀಕರಣಕ್ಕೆ ತರಬೇತಿ ಮತ್ತು ಉಚಿತ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುಣಮಟ್ಟದ ಬೀಜಗಳು ಮತ್ತು ಕೃಷಿ ಪರಿಕರಗಳ ಉಚಿತ ವಿತರಣೆ ಮತ್ತು ವೈಜ್ಞಾನಿಕ ಮಾರ್ಗದರ್ಶನದ ಮೂಲಕ ಪರಿಶಿಷ್ಟ ಸಮುದಾಯ ರೈತರ ಉತ್ಪಾದಕತೆ ಹಾಗೂ ಆದಾಯವನ್ನು ಹೆಚ್ಚಿಸುವುದು ಮುಖ್ಯ ಗುರಿಯಾಗಿತ್ತು ಎಂದರು.
ಕೃಷಿ ವಿವಿಯ ವಿಶೇಷ ಅಧಿಕಾರಿ ಡಾ. ಕೆ. ವಿಶ್ವನಾಥ್ ಮಾತನಾಡಿ, ಗುಣಮಟ್ಟದ ಬೀಜಗಳು ಮತ್ತು ಕೃಷಿ ಪರಿಕರಗಳ ವಿತರಣೆ, ತಾಂತ್ರಿಕ ಮಾರ್ಗದರ್ಶನ ಮತ್ತು ನಿರಂತರ ಸಂಪರ್ಕದ ಮೂಲಕ ರೈತರ ಜೀವನಮಟ್ಟ ಸುಧಾರಿಸಲು ಸಾಧ್ಯ ಎಂದು ಹೇಳಿದರು.
ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಜಿ. ಕೆ. ನಿಂಗರಾಜು ಮಾತನಾಡಿ, ರಾಗಿ, ತೊಗರಿ, ಮುಸುಕಿನ ಜೋಳ ಇತರೆ ಬೆಳೆಗಳ ವೈಜ್ಞಾನಿಕ ಬೆಳೆ ಬೆಳೆಯುವ ವಿಧಾನ ಬಗ್ಗೆ ತಿಳಿಸಿಕೊಟ್ಟರು. ವಿಜ್ಞಾನಿ ಡಾ. ಬಾಲಾಜಿ ನಾಯಕ್ ಮಾತನಾಡಿ, ಸಮತೋಲನ ಪೋಷಕಾಂಶ ಬಳಕೆ, ಜೈವಿಕ ಪದಾರ್ಥಗಳ ಬಳಕೆ ಹಾಗೂ ಮಣ್ಣಿನ ದೀರ್ಕಾಲಿಕ ಉತ್ಪಾದಕತೆ ಹೆಚ್ಚಳಕ್ಕೆ ಕ್ರಮ ಹಾಗೂ ಸಮಗ್ರ ಕೀಟ ನಿರ್ವಹಣಾ ಕ್ರಮಗಳ ಅಗತ್ಯತೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಸಹಾಯಕ ಪ್ರಾಧ್ಯಾಪಕ ಡಾ. ಎ. ಬಿ. ನಾರಾಯಣರೆಡ್ಡಿ ಮಾತನಾಡಿ, ಕೊಯ್ಲು ಮತ್ತು ಕೊಯ್ಲಿನೋತ್ತರದ ನಂತರ ನಿರ್ವಹಣೆ ಮತ್ತು ಬೀಜ ಶೇಖರಣೆ ಕುರಿತು ಮಾಹಿತಿ ನೀಡಿದರು. ರೈತರಿಗೆ ಗುಣಮಟ್ಟದ ಬೀಜಗಳು ಮತ್ತು ಅಗತ್ಯ ಕೃಷಿ ಪರಿಕರ ಉಚಿತವಾಗಿ ವಿತರಿಸಲಾಯಿತು.