- *ಸಂಕ್ರಾಂತಿ ಬಳಿಕ ಹೊಸ ಪದಾಧಿಕಾರಿಗಳಿಗೆ ನೇಮಕ ಪತ್ರ
- *ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಬಳಿಕ ತೀರ್ಮಾನ
ರಾಜ್ಯಮಟ್ಟದಲ್ಲಿರುವ ತನ್ನ ಎಲ್ಲಾ ಘಟಕಗಳ ಪುನಾರಚನೆಗೆ ಮುಂದಾಗಿರುವ ಜೆಡಿಎಸ್, ಸಂಕ್ರಾಂತಿ ಬಳಿಕ ಹೊಸ ಪದಾಧಿಕಾರಿಗಳ ನೇಮಕ ಮಾಡಲಿದೆ.
ಮಹಿಳಾ ವಿಭಾಗ, ಯುವ ವಿಭಾಗ, ರೈತ, ಎಸ್‌ಸಿ, ಎಸ್ಟಿ, ವಿಭಾಗ, ಕಾನೂನು, ಹಿಂದುಳಿದ ವರ್ಗಗಳ ವಿಭಾಗ ಸೇರಿದಂತೆ ಒಟ್ಟು 14 ಘಟಕಗಳು ಜೆಡಿಎಸ್‌ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಸದ್ಯ ಎಲ್ಲೆ ಘಟಕಗಳು ವಿಸರ್ಜಯಾಗಿದ್ದು, ಅಲ್ಲಿಗೆ ಯಾರ‌್ಯಾರನ್ನು ನೇಮಕ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಹಲವು ಸುತ್ತಿನ ಮಾತುಕತೆ, ಚರ್ಚೆ ನಡೆಸಲಾಗಿದೆ.
ರಾಜ್ಯ ಕೋರ್ ಕಮಿಟಿ, ಈ ಜವಬ್ದಾರಿಯನ್ನು ನಿಭಾಯಿಸುತ್ತಿದ್ದು, ಯಾರ‌್ಯಾರಿಗೆ ಹೊಸ ಜವಬ್ದಾರಿ ನೀಡಬೇಕು ಎನ್ನುವುದನ್ನು ಬಹುತೇಕ ಅಂತಿಮ ಮಾಡಲಾಗಿದೆ.
ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರುಗಳ ಜೊತೆಗೆ ಅಂತಿಮ ಸಮಾಲೋಚನೆ ನಡೆಸಿ ಪಟ್ಟಿಯನ್ನು ಪ್ರಕಟ ಮಾಡಲಾಗುವುದು.
ಹೊಸ ಪದಾಧಿಕಾರಿಗಳಿಗೆ ಸಂಕ್ರಾಂತಿ ಬಳಿಕವೇ ಆದೇಶ ಪತ್ರಗಳನ್ನು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಹಸ್ತಾಂತರ ಮಾಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
5 ಜಿಲ್ಲಾ ಘಟಕಗಳ ಅಧ್ಯಕ್ಷರ ಬದಲಾವಣೆ:
ಜಿಲ್ಲಾ ಘಟಕಗಳ ಜವಬ್ದಾರಿ ಹೊತ್ತಿರುವ ಹಲವು ಜಿಲ್ಲೆಯ ಅಧ್ಯಕ್ಷರುಗಳು ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ವರದಿಗಳು ಕೋರ್ ಕಮಿಟಿನ್ನು ತಲುಪಿದೆ. ಈ ಬಗ್ಗೆ ರಾಜ್ಯ ಘಟಕ ಕೂಡ ತನ್ನದೇ ಮೂಲಗಳಿಂದ ಮಾಹಿತಿ ಪಡೆದಿದ್ದು, ಅಲ್ಲಿಗೆ ಯಾರನ್ನು ನೇಮಕ ಮಾಡಬೇಕು ಎನ್ನುವುದನ್ನು ಚರ್ಚೆ ಮಾಡುತ್ತಿದೆ. ಮೊದಲ ಹಂತದಲ್ಲಿ 5 ಜಿಲ್ಲೆಯ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲು ನಿರ್ಣಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದು ಹಂತದಲ್ಲಿ ಇನ್ನಷ್ಟು ಜಿಲ್ಲೆಗಳ ಅಧ್ಯಕ್ಷರ ಬದಲಾವಣೆ ಮಾಡಲಾಗುವುದು. ಈಗಲೂ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿರುವ ಅಧ್ಯಕ್ಷರನ್ನು ಮಾತ್ರವೇ ಮುಂದುವರಿಸಲಾಗುವುದು ಎಂದು ಹಿರಿಯ ಮುಖಂಡರು ತಿಳಿಸಿದ್ದಾರೆ.
ಜಿಬಿಎ ಚುನಾವಣೆಗೆ ವಾರ್ಡ್‌ಗಳ ಮೀಸಲಾತಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಜೆಡಿಎಸ್ ಸಜ್ಜುಗೊಳಿಸಲು ಕ್ರಮ ವಹಿಸಲಾಗಿದೆ. ಶುಕ್ರವಾರ ಜಿಬಿಎ ಅಧ್ಯಕ್ಷರುಗಳ ಸಭೆಯನ್ನು ಕರೆಯಲಾಗಿದ್ದು, ಅಲ್ಲಿ 369 ವಾರ್ಡ್‌ಗಳ ಬಗ್ಗೆಯೂ ಮಾಹಿತಿ ಪಡೆದು ಎಲ್ಲಿ ಶಕ್ತಿ ಇದೆಯೋ ಅಲ್ಲಿ ಮಾತ್ರವೇ ಸ್ಪರ್ಧೆ ಮಾಡಲಾಗುವುದು ಎಂದು ಜೆಡಿಎಸ್ ತಿಳಿಸಿದೆ.
*ಪಕ್ಷದ ವತಿಯಿಂದ ಎಲ್ಲೆಲ್ಲಿ, ಏನೇನು ಬದಲಾವಣೆ ಮಾಡಬೇಕು ಎನ್ನುವುದನ್ನು ಸಭೆಗಳನ್ನು ಮಾಡಿ ಚರ್ಚೆ ಮಾಡಲಾಗಿದೆ.ರಾಜ್ಯ ಘಟಕಗಳಿಗೆ ಸಂಕ್ರಾಂತಿ ಬಳಿಕ ಆದೇಶ ಪತ್ರವನ್ನು ನೀಡಲಾಗುವುದು. ಜಿಲ್ಲಾ ಘಟಕಗಳನ್ನು ಪುನಾರಚನೆಯೂ ಇದರಲ್ಲಿ ಸೇರಿದೆ.
-ಕೃಷ್ಣಾರೆಡ್ಡಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು.