ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಮೈಸೂರು ವಿಭಾಗೀಯ ಆರೋಗ್ಯ ಸೇವಾ ಪ್ರಾಧಿಕಾರದ ಉಪನಿರ್ದೇಶಕಿ ಡಾ.ಬಿ.ಮಲ್ಲಿಕಾ ಅವರು ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಕರವೇ ಪದಾಧಿಕಾರಿಗಳೊಂದಿಗೆ ಚರ್ಚಿಸಿದರು. ವಸಂತ್, ನಂದೀಶ್, ಚಂದ್ರು, ಜಾನ್‌ಸನ್ ಇದ್ದರು. 
ರಾಜ್ಯ

ಸೋ.ಪೇಟೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಲು ಕ್ರಮ

ಸೋಮವಾರಪೇಟೆ:

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಕರವೇ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಸಲ್ಲಿಸಿದ್ದ ಮನವಿಗೆ ಆರೋಗ್ಯ ಇಲಾಖೆ ಸ್ಪಂದಿಸಿದೆ.


ಮೈಸೂರು ವಿಭಾಗೀಯ ಆರೋಗ್ಯ ಸೇವಾ ಪ್ರಾಧಿಕಾರದ ಉಪನಿರ್ದೇಶಕಿ ಡಾ.ಬಿ.ಮಲ್ಲಿಕಾ ಅವರು ಬುಧವಾರ ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ, ಕರವೇ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಆಸ್ಪತ್ರೆಯಲ್ಲಿರುವ ವಿವಿಧ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ಶೀಘ್ರ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.


ಆಸ್ಪತ್ರೆಗೆ ಅರಿವಳಿಕೆ ತಜ್ಞರು, ಮೂಳೆ ಮತ್ತು ಕೀಲು ತಜ್ಞರು ಹಾಗೂ ಮಕ್ಕಳ ವೈದ್ಯರನ್ನು ಕಾಯಂ ಆಗಿ ನೇಮಕ ಮಾಡಬೇಕು. ಆಸ್ಪತ್ರೆಯ ನೈರ್ಮಲ್ಯೀಕರಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಪಾವತಿಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಬೇಕು. ಹಾಸನ, ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಆರೋಗ್ಯಾಧಿಕಾರಿಗಳೊಂದಿಗೆ ಸಮಾಲೋಚಿಸಿ, ವೈದ್ಯರ ಕೊರತೆ ಸೇರಿದಂತೆ ಆಸ್ಪತ್ರೆಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ವೈದ್ಯಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ವಸಂತ್ ಆಚಾರ್ಯ ಒತ್ತಾಯಿಸಿದರು.


ಮನವಿಗೆ ಸ್ಪಂದಿಸಿದ ಉಪನಿರ್ದೇಶಕಿ ಡಾ.ಬಿ.ಮಲ್ಲಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು. ಆಸ್ಪತ್ರೆಗೆ ನೂತನ ಆಂಬುಲೆನ್ಸ್ ಒದಗಿಸುವ ಕುರಿತು ಚರ್ಚೆ ನಡೆದಿದ್ದು, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.

ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಚಂದ್ರು, ಪದಾಧಿಕಾರಿಗಳಾದ ನಂದೀಶ್, ಜಾನ್ಸನ್, ರವೀಶ್ ಇತರರು ಇದ್ದರು.