ಗೋಗಿ ಸಮೀಪದ ಹೊಸಕೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ದೇವರಾಜ ನಾಯಕ ಮಾತನಾಡಿದರು. ಅಬ್ದುಲï ಗೋಗಿ, ಶರಣಪ್ಪಗೌಡ ಉಕ್ಕಿನಾಳ, ಶಿವಲಿಂಗಮ್ಮ, ವೇದಾವತಿ, ಮಹಾಂತಯ್ಯ ಹಿರೇಮಠ, ನಾಗರಾಜ ಇತರರಿದ್ದರು.
- ಯುವಕರಿಗೆ ಮೇಲ್ವಿಚಾರಕ ದೇವರಾಜ ನಾಯಕ ಕರೆ
- ಗೋಗಿಯಲ್ಲಿ ಜಾಗೃತಿ ಕಾರ್ಯಕ್ರಮ
ಇಂದಿನ ಯುವಕರು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ದೇವರಾಜ ನಾಯಕ ಕರೆ ನೀಡಿದರು.
ಹೊಸಕೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಶಹಾಪುರ ತಾಲೂಕು ವತಿಯಿಂದ ಮಂಗಳವಾರ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನತೆ ಹಾಗೂ ವಿದ್ಯಾರ್ಥಿಗಳು ಮಾದಕ ವ್ಯಸನದ ದುಷ್ಪರಿಣಾಮ ಅರಿತು ಉತ್ತಮ ಅಭ್ಯಾಸ ಬೆಳೆಸಿಕೊಂಡಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ವಿದ್ಯಾರ್ಥಿ ಜೀವನ ವ್ಯಕ್ತಿತ್ವ ರೂಪಿಸಿಕೊಳ್ಳುವ ಸುವರ್ಣಾವಕಾಶವಾಗಿದ್ದು, ಈ ಹಂತದಲ್ಲಿ ಧೂಮಪಾನ, ಮದ್ಯಪಾನ ಹಾಗೂ ಇತರ ಮಾದಕ ವ್ಯಸನಗಳಿಂದ ದೂರವಿದ್ದು ಶಿಕ್ಷಣ, ಶಿಸ್ತು ಮತ್ತು ಸದ್ಗುಣಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಉತ್ತಮ ಆರೋಗ್ಯ ಹಾಗೂ ಉತ್ತಮ ಚಾರಿತ್ರ‍್ಯವೇ ಯಶಸ್ಸಿನ ಮೂಲ ಅಡಿಪಾಯವಾಗಿದೆ ಎಂದರು. ಅಬ್ದುಲï ಗೋಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಮುಖ್ಯಗುರು ಶರಣಪ್ಪಗೌಡ ಉಕ್ಕಿನಾಳ ವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಶಿವಲಿಂಗಮ್ಮ, ಸದಸ್ಯೆ ವೇದಾವತಿ, ಶಿಕ್ಷಕರಾದ ಮಹಾಂತಯ್ಯ ಹಿರೇಮಠ, ನಾಗರಾಜ ಇತರರಿದ್ದರು.