ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಮುಂಭಾಗ ಬುಧವಾರ ಬೈಕ್ ರ‌್ಯಾಲಿಗೆ ಡಿವೈಎಸ್ಪಿ ಮೋಹನ್ ಚಾಲನೆ ನೀಡಿದರು. ವರ್ಷಾ, ಸುಪ್ರೀತ್, ಚಲುವರಾಜ್ ಇತರರಿದ್ದರು.
- ಮಾದಕ ವಸ್ತುಗಳ ಬಳಕೆ ಮತ್ತು ಪೂರೈಕೆ ವಿರೋಧ ಜಾಗೃತಿ ಅಭಿಯಾನ
- ಪಟ್ಟಣ ಪೊಲೀಸ್ ಠಾಣೆಯಿಂದ ಬೈಕ್ ರ‌್ಯಾಲಿ
ಕೊಳ್ಳೇಗಾಲ: ಮಾದಕ ವಸ್ತುಗಳ ಬಳಕೆ ಮತ್ತು ಪೂರೈಕೆ ವಿರೋಧ ಜಾಗೃತಿ ಅಭಿಯಾನ ಅಂಗವಾಗಿ ಪಟ್ಟಣದಲ್ಲಿ ಬುಧವಾರ ಪಟ್ಟಣ ಪೊಲೀಸ್ ಠಾಣೆಯಿಂದ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು.
ಕೊಳ್ಳೇಗಾಲ ಉಪವಿಭಾಗ ಪೊಲೀಸ್ ಉಪ ಅಧೀಕ್ಷಕ ಮೋಹನ್ ಪಟ್ಟಣ ಪೊಲೀಸ್ ಠಾಣೆ ಮುಂಭಾಗ ಹಸಿರು ನಿಶಾನೆ ತೋರುವ ಮೂಲಕ ಬೈಕ್ ರ‌್ಯಾಲಿಗೆ ಚಾಲನೆ ನೀಡಿದರು.
ಯುವಜನರು ಸೇರಿದಂತೆ ಸಮಾಜ ಎಲ್ಲ ವರ್ಗದವರು ಕೂಡ ಮಾದಕ ವಸ್ತುಗಳಿಂದ ದೂರವಿದ್ದಾಗ ಮಾತ್ರ ಆರೋಗ್ಯಕರ ಮತ್ತು ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮೋಹನ್ ಹೇಳಿದರು.
ರ‌್ಯಾಲಿಯು ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ, ಪ್ರವಾಸಿ ಮಂದಿರ ರಸ್ತೆ, ಎಂಜಿಎಸ್ ವಿ ಕಾಲೇಜು ರಸ್ತೆ ಇತರ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ನಶೆಯಿಂದ ದೂರವಿರಿ..ಬದುಕನ್ನು ಉಜ್ವಲಗೊಳಿಸಿ... ಡ್ರಗ್ಸ್‌ಗೆ ಇಲ್ಲ ಎನೋಣ.. ಜೀವನದತ್ತ ಹೆಜ್ಜೆ ಹಾಕೋಣ...ವ್ಯಸನವಿಲ್ಲದ ಯುವಕರು ದೇಶದ ಭವಿಷ್ಯ... ಎಂಬಿತ್ಯಾದಿ ಬರಹಗಳ ಪೋಸ್ಟರ್‌ಗಳನ್ನು ಪಟ್ಟಣ ಪೊಲೀಸರು ಹಿಡಿದು ಜಾಗೃತಿ ಮೂಡಿಸಿದರು.
ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆ ಸಬ್ ಇನ್‌ಷ್ಪೆಕ್ಟರ್ ವರ್ಷಾ, ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್‌ಷ್ಪೆಕ್ಟರ್ ಸುಪ್ರೀತ್, ಅಪರಾಧ ವಿಭಾಗದ ಪಿಎಸ್‌ಐ ಚಲುವರಾಜ್ ಇತರರಿದ್ದರು.