ವಿಜಯಪುರದ ಗುರಪ್ಪನ ಮಠದ ಸರ್ಕಾರಿ (ಪೂರ್ವ) ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಸ್ತು ವಿರೋಧಿ ದಿನಾಚರಣೆ ಜಾಗೃತಿ ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ಸದಸ್ಯ ಬಲಮುರಿ ಶ್ರೀನಿವಾಸ್ ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಸುಜಾತಾ, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ವಿಜಯಪುರ : ವಿದ್ಯಾರ್ಥಿದೆಸೆ ಎಂಬುದು ಜೀವನದ ಅತ್ಯಂತ ಅಮೂಲ್ಯವಾದ ಟ್ಟ. ಈ ಹಂತದಲ್ಲಿ ಕುತೂಹಲಕ್ಕೆ ಅಥವಾ ಸ್ನೇಹಿತರ ಒತ್ತಾಯಕ್ಕೆ ಸಿಲುಕಿ ಮಾದಕ ವಸ್ತುಗಳ ದಾಸರಾದರೆ ಇಡೀ ಭವಿಷ್ಯವೇ ಕತ್ತಲಾಗಿಬಿಡುತ್ತದೆ ಎಂದು ಜನಜಾಗೃತಿ ವೇದಿಕೆಯ ಸದಸ್ಯ ಬಲಮುರಿ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಗುರಪ್ಪನ ಮಠದ ಸರ್ಕಾರಿ (ಪೂರ್ವ) ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಾದಕ ದ್ರವ್ಯಗಳು ಕೇವಲ ವ್ಯಕ್ತಿಯ ಆರೋಗ್ಯ ಮಾತ್ರವಲ್ಲದೆ, ಅವರ ಕುಟುಂಬದ ನೆಮ್ಮದಿ ಮತ್ತು ಸಮಾಜದಲ್ಲಿನ ಗೌರವವನ್ನು ಸಂಪೂರ್ಣವಾಗಿ ನಾಶಮಾಡುತ್ತವೆ. ಯುವ ಪೀಳಿಗೆ ಇಂತಹ ಮಾರಕ ದುಶ್ಚಟಗಳಿಂದ ದೂರವಿದ್ದು, ತಮ್ಮ ಗಮನವನ್ನು ಶಿಕ್ಷಣ ಮತ್ತು ಕ್ರೀಡೆಗಳತ್ತ ಹರಿಸಬೇಕು ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಡಪದ್ ಮಾತನಾಡಿ, ಧೂಮಪಾನ, ಮದ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಸಂಪೂರ್ಣವಾಗಿ ಕುಂಠಿತಗೊಳ್ಳುತ್ತದೆ. ಶರಣರು ಅಂದೇ ಹೇಳಿದಂತೆ "ಅರಿವೇ ಗುರು, ಆಚಾರವೇ ಸ್ವರ್ಗ'. ನಾವು ನಮ್ಮ ನಡವಳಿಕೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ತಂಬಾಕು ಮತ್ತು ಮಾದಕ ವಸ್ತುಗಳ ಕಡೆಗೆ ಆಕರ್ಷಿತರಾಗದೆ, ಉತ್ತಮ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ದೇಶದ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದರು. ವಾರ್ಡ್ ಕೌನ್ಸಿಲರ್ ಭೈರೇಗೌಡ ಮಾತನಾಡಿ, ಶಾಲಾ&ಕಾಲೇಜುಗಳ ಸುತ್ತಮುತ್ತ ಯಾವುದೇ ರೀತಿಯ ಮಾದಕ ವಸ್ತುಗಳು ಅಥವಾ ತಂಬಾಕು ಉತ್ಪನ್ನಗಳ ಮಾರಾಟ ನಡೆಯದಂತೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಮತ್ತು ದುಶ್ಚಟಗಳ ವಿರುದ್ಧ ದನಿ ಎತ್ತಬೇಕು ಎಂದು ನುಡಿದರು.