ಏನಿದು ಜಿಸಿಸಿ?: ಸರಳವಾಗಿ ಹೇಳುವುದಾದರೆ, ಬೃಹತ್ ಅಂತಾರಾಷ್ಟ್ರೀಯ ಕಂಪನಿಯು ತನ್ನ ವ್ಯವಹಾರದ ಕೆಲವು ಮುಖ್ಯ ಕೆಲಸ ನಿರ್ವಹಿಸಲು ಬೇರೆ ದೇಶಗಳಲ್ಲಿ ಸ್ಥಾಪಿಸುವ ತನ್ನದೇ ಆದ ಸ್ವಂತ ಕಚೇರಿ ಅಥವಾ ಘಟಕವನ್ನು ಗ್ಲೋಬಲ್ ಕೇಪಬಲಿಟಿ ಸೆಂಟರ್ (ಜಿಸಿಸಿ) ಎನ್ನಲಾಗುತ್ತದೆ.
ಸಾಮಾನ್ಯವಾಗಿ ದೊಡ್ಡ ಕಂಪನಿಗಳು ತಮ್ಮ ಕೆಲಸವನ್ನು ಬೇರೆ ಕಂಪನಿಗಳಿಗೆ ವಹಿಸಿಕೊಡುತ್ತವೆ. ಆದರೆ ಜಿಸಿಸಿಯಲ್ಲಿ ಕಂಪನಿಯು ತನ್ನ ಸ್ವಂತ ಕಚೇರಿಯನ್ನೇ ತೆರೆಯುತ್ತದೆ. ಅಲ್ಲಿ ಕೆಲಸ ಮಾಡುವವರು ನೇರವಾಗಿ ಅದೇ ಕಂಪನಿಯ ಉದ್ಯೋಗಿಗಳಾಗಿರುತ್ತಾರೆ. ಈ ಬೆಳವಣಿಗೆ ರಾಜ್ಯದ ರಾಜಧಾನಿಯಲ್ಲಿ ಗಣನೀಯವಾಗಿ ವೃದ್ಧಿಯಾಗುತ್ತಿದ್ದು, ಯಾವ ಮಟ್ಟಿಗೆ ಎಂದರೆ, ರಾಷ್ಟ್ರ ರಾಜಧಾನಿ ದೆಹಲಿ, ದೇಶದ ವಾಣಿಜ್ಯ ನಗರಿ ಮುಂಬೈ, ನೆರೆಯ ಹೈದ್ರಾಬಾದ್ ಎಲ್ಲವನ್ನೂ ಮೀರಿಸಿ ಬೆಂಗಳೂರು ಮುಂಚೂಣಿಯಲ್ಲಿದೆ. ಪ್ರಸ್ತುತ ಕರ್ನಾಟಕದಲ್ಲಿ 900ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಜಗತ್ತಿನ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಗಳನ್ನು ಸರ್ಕಾರ ಗುರುತಿಸಿದೆ.
ಲಾಭವೇನು?: ಆರ್ಥಿಕತೆಯ ದೃಷ್ಟಿಯಿಂದ ನೋಡುವುದಾದರೆ ಈ ಜಿಸಿಸಿ ವಲಯವು ವಾರ್ಷಿಕವಾಗಿ 22 ಬಿಲಿಯನ್ (ಸರಿ ಸುಮಾರು 1.8 ಲಕ್ಷ ಕೋಟಿ ರೂ.)ಗಿಂತ ಹೆಚ್ಚು ಕೊಡುಗೆ ನೀಡುವ ಮೂಲಕ ರಾಜ್ಯದ ಜಿಡಿಪಿಗೆ ಭಾರಿ ಶಕ್ತಿ ತುಂಬುತ್ತಿದೆ. 6 ಲಕ್ಷಕ್ಕೂ ಹೆಚ್ಚು ನುರಿತ ವೃತ್ತಿಪರರು ಈ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕವು ವಿಶ್ವದ ಅತಿ ದೊಡ್ಡ ತಾಂತ್ರಿಕ ಪ್ರತಿಭೆಗಳ ಭಂಡಾರವಾಗಿ ಹೊರಹೊಮ್ಮಿದೆ. ಇದು ಕೇವಲ ಅಂಕಿ ಅಂಶವಲ್ಲ, ಬದಲಾಗಿ ನಮ್ಮ ನಾಡಿನ ಆರ್ಥಿಕ ಸದೃಢತೆಯ ಸಂಕೇತವೆಂದೂ ವಿಶ್ಲೇಷಿಸಬಹುದಾಗಿದೆ.
ಜಾಗತಿಕವಾಗಿ ಅತಿದೊಡ್ಡ ಬ್ಯಾಂಕುಗಳು, ರೀಟೇಲ್ ದೈತ್ಯ ಕಂಪನಿಗಳು ಮತ್ತು ವಾಹನ ತಯಾರಿಕಾ ಕಂಪನಿಗಳು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೇಂದ್ರಗಳನ್ನು ಇಲ್ಲಿ ಸ್ಥಾಪಿಸಿವೆ ಎಂಬುದು ವಿಶೇಷ. ಈ ಮೂಲಕ ಕನ್ನಡ ನಾಡು ಕೇವಲ ಸಾಫ್ಟ್ವೇರ್ ಬರೆಯುವ ನೆಲವಾಗಿ ಉಳಿಯದೆ, ಜಾಗತಿಕ ಕಂಪನಿಗಳ ಭವಿಷ್ಯದ ತಂತ್ರಗಳನ್ನು ರೂಪಿಸುವ ಸ್ಟ್ರಾಟೆಜಿಕ್ ಹಬ್ ಆಗಿಯೂ ರೂಪಾಂತರವಾಗುತ್ತಿದೆ. ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್, ಇಂಟೆಲ್ನಂತಹ ಐಟಿ ದಿಗ್ಗಜ ಕಂಪನಿಗಳ ಜತೆ ಗೋಲ್ಡ್ಮನ್ ಸ್ಯಾಕ್ಸ್, ಜೆಪಿ ಮೋರ್ಗನ್ ಚೇಸ್, ಎಚ್ಎಸ್ಬಿಸಿ, ವಾಲ್ವಾರ್ಟ್, ಟಾರ್ಗೆಟ್, ಟೆಸ್ಕೊ, ಬೆಂಜ್, ಶೆಲ್, ಏರ್ಬಸ್ನಂತಹ ಕಂಪನಿಗಳು ಇಲ್ಲಿ ಬೇರೂರುತ್ತಿವೆ.
ಜಿಸಿಸಿ ಪೈಕಿ ಬೆಂಗಳೂರಲ್ಲಿ ಸಾಫ್ಟ್ವೇರ್ ಮತ್ತು ಐಟಿ ಸೇವೆಗಳು ಸಿಂಹಪಾಲನ್ನು ಹೊಂದಿವೆ. ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸೈಬರ್ ಸೆಕ್ಯುರಿಟಿ ವಿಭಾಗಗಳಲ್ಲಿ ಹೆಚ್ಚು ಜಿಸಿಸಿಗಳು ಕಾರ್ಯನಿರ್ವಹಿಸುತ್ತಿವೆ. ಜಾಗತಿಕ ಬ್ಯಾಂಕುಗಳ ಡೇಟಾ ಅನಾಲಿಟಿಕ್ಸ್ ಮತ್ತು ಡಿಜಿಟಲ್ ಪೇಮೆಂಟ್ ಸಂಶೋಧನೆಗಳು ಇಲ್ಲಿ ಹೆಚ್ಚಾಗಿ ನಡೆಯುತ್ತವೆ.
ಬೆಂಗಳೂರು ಭಾರತದ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಬೆಳವಣಿಗೆಯನ್ನು ಮುನ್ನಡೆಸುತ್ತಾ ಸಾಗಿದ್ದು, ರಾಷ್ಟ್ರದ ನಾವೀನ್ಯತೆ ಮತ್ತು ತಂತ್ರಜ್ಞಾನದ ರಾಜಧಾನಿಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
1 ಕೇವಲ ಮಾಹಿತಿ ತಂತ್ರಜ್ಞಾನವಲ್ಲದೆ, ಡೇಟಾ ಸೈನ್ಸ್, ರೋಬಾಟಿಕ್ಸ್ ಮತ್ತು ಸೈಬರ್ ಸೆಕ್ಯುರಿಟಿಯಂತಹ ಕ್ಷೇತ್ರದಲ್ಲಿ ಉನ್ನತ ಸಂಬಳದ ಉದ್ಯೋಗಗಳು ಸೃಷ್ಟಿಯಾಗುತ್ತವೆ
2 ಹೆಚ್ಚಿನ ಸಂಖ್ಯೆಯ ಜಿಸಿಸಿ ಎಂದರೆ ರಾಜ್ಯಕ್ಕೆ ಹರಿದು ಬರುವ ವಿದೇಶಿ ನೇರ ಹೂಡಿಕೆ ಹೆಚ್ಚಾಗುತ್ತದೆ.
3 ಜಿಸಿಸಿಗಳು ಸ್ಥಾಪನೆಯಾದ ಪ್ರದೇಶಗಳಲ್ಲಿ ಪರೋಕ್ಷವಾಗಿ ರಿಯಲ್ ಎಸ್ಟೇಟ್, ಸಾರಿಗೆ, ಹೋಟೆಲ್ ಮತ್ತು ಇತರ ಸಣ್ಣ ಉದ್ಯಮಗಳಿಗೆ ಬೇಡಿಕೆ ಬರುತ್ತದೆ.
4 ವಿಶ್ವದ ಪ್ರಮುಖ ಕಂಪನಿಗಳ ಕೇಂದ್ರ ಕಚೇರಿಗಳು ಇಲ್ಲಿರುವುದರಿಂದ ಕರ್ನಾಟಕದ ಹೆಸರು ಜಾಗತಿಕ ಮಟ್ಟದಲ್ಲಿ ರಾರಾಜಿಸುತ್ತದೆ.
ರಾಜ್ಯ ಸರ್ಕಾರವು ಈ ಬೆಳವಣಿಗೆಯನ್ನು ಗಮನಿಸಿ, ದೇಶದಲ್ಲೇ ಮೊದಲ ಬಾರಿಗೆ ಜಿಸಿಸಿಗಳಿಗಾಗಿಯೇ ಪ್ರತ್ಯೇಕ ನೀತಿಯನ್ನು ರೂಪಿಸಿತು. ಈ ನೀತಿಯು ಹೂಡಿಕೆದಾರರಿಗೆ ಭರವಸೆ ನೀಡುವುದಲ್ಲದೆ, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಜಿಸಿಸಿ ಸ್ಥಾಪಿಸುವವರಿಗೆ ಭಾರಿ ರಿಯಾಯಿತಿ ನೀಡಿ ಆ ಭಾಗದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಉದ್ಯೋಗಿಗಳಿಗೆ ಜಾಗತಿಕ ಮಟ್ಟದ ತರಬೇತಿ ನೀಡಲು ಸರ್ಕಾರದಿಂದ ವಿಶೇಷ ಸಹಾಯಧನ, ಮೂಲಸೌಕರ್ಯ ಮತ್ತು ತೆರಿಗೆ ರಿಯಾಯಿತಿ ಪ್ರಕಟಿಸಲಾಗಿದೆ.