- ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳಿಗೆ ಅನುಮತಿ
- ಕೇವಲ ಐದು ಪಂದ್ಯಗಳಿಗಷ್ಟೇ ಗೃಹ ಇಲಾಖೆಯಿಂದ ಒಪ್ಪಿಗೆ
- ಆರ್‌ಸಿಬಿ ವಿಧಿಸಿದ ಷರತ್ತಿನ ಬೆನ್ನಲ್ಲೇ ಈ ನಿರ್ಧಾರ
ಬೆಂಗಳೂರು: ಕಳೆದ 18 ವರ್ಷಗಳಿಂದ ಈ ಸಲ ಕಪ್ ನಮ್ದೆ ಅಂತಾ ಹೇಳಿ ಹೇಳಿ ಬೇಸರಗೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಅಭಿಮಾನಿಗಳಿಗೆ 2025 ಮರೆಯಲಾಗದ ವರ್ಷ. ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಖುಷಿ ಒಂದೆಡೆಯಾದರೆ, ಆ ಗೆಲುವಿನ ಸಂಭ್ರಮನ್ನು ಕಸಿದುಕೊಂಡ ಮಹಾ ದುರಂತ ಇನ್ನೊಂದೆಡೆ. ಕಪ್ ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು ಇಂದಿಗೂ ಕಹಿ ನೆನಪಾಗಿಯೇ ಅಭಿಮಾನಿಗಳ ಎದೆಯಲ್ಲಿ ಉಳಿದಿದೆ.
ಈ ಒಂದು ಕಾರಣಕ್ಕೆ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸದಿರಲು ಸರ್ಕಾರ ನಿರ್ಧರಿಸಿತು. ಇದರಿಂದ ಅಸಂಖ್ಯಾತ ಆರ್‌ಸಿಬಿ ಅಭಿಮಾನಿಗಳಿಗೆ ಸಖತ್ ಬೇಜಾರಾಗಿತ್ತು. ತಮ್ಮ ನೆಚ್ಚಿನ ತಂಡದ ಆಟವನ್ನು ನೇರವಾಗಿ ಕಣ್ತುಂಬಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ಅಭಿಮಾನಿಗಳು ಮುಳುಗಿದ್ದರು. ಆದರೆ, ಆ ಚಿಂತೆ ಇನ್ನು ಬೇಡ. ಅಧಿಕೃತವಾಗಿ ಆರ್ಸಿಬಿಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವುದಾಗಿ ಹೇಳಿತು. ಆದರೆ, ಒಂದಿಷ್ಟು ಷರತ್ತುಗಳನ್ನು ವಿಧಿಸಿತು. ಇದರ ಬೆನ್ನಲ್ಲೇ ರಾಜ್ಯ ಗೃಹ ಇಲಾಖೆ ಷರತ್ತಿನ ಮೇರೆಗೆ ಅನುಮತಿ ಸೂಚಿಸಿದೆ.
ಕೇವಲ ಐದು ಪಂದ್ಯಗಳಿಗೆ ಮಾತ್ರ...
ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಿಂದ ಆರಂಭಗೊಳ್ಳಲಿರುವ ಐಪಿಎಲ್ 2026ರ 19ನೇ ಆವೃತ್ತಿಗೆ ಅದಾಗಲೇ ದಿನಗಣನೆ ಆರಂಭಗೊಂಡಿದೆ. ಈ ಮಧ್ಯೆ, ಆರ್‌ಸಿಬಿ ಮ್ಯಾನೇಜ್ಮೆಂಟ್ ವಿಧಿಸಿದ ಷರತ್ತುಗಳನ್ನು ಗಮನಿಸಿದ ಗೃಹ ಇಲಾಖೆ, ಕೇವಲ ಐದು ಪಂದ್ಯಗಳಿಗೆ ಮಾತ್ರ ಅವಕಾಶಕ್ಕೆ ಅನುಮತಿ ಸೂಚಿಸಿದೆ. ಇದು ಒಂದೆಡೆ ಖುಷಿ ನೀಡಿದ್ದೇ ಆದರೂ ಕೇವಲ 5 ಪಂದ್ಯಗಳು ಯಾವ ಲೆಕ್ಕಾಚಾರ? ಎಂಬ ಪ್ರಶ್ನೆಗಳು ಉದ್ಬವಿಸಿವೆ. ಒಟ್ಟಾರೆ 14 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯಗಳನ್ನಾದರೂ ತವರಿನಲ್ಲಿ ಆಡಿಸಿದರೆ ಅದೊಂದು ಲೆಕ್ಕ ಎಂಬ ಮಾತುಗಳು ಕೇಳಿಬಂದಿವೆ. ಗೃಹಇಲಾಖೆ ನೀಡಿರುವ ಪಂದ್ಯದ ಲೆಕ್ಕ ಮುಂದಿನ ದಿನಗಳಲ್ಲಿ ಬದಲಾಗುವ ಸಾದ್ಯತೆಗಳಿವೆ ಎಂದೇ ಹೇಳಬಹುದು.
ಆರ್‌ಸಿಬಿ ಹಾಕಿದ ಷರತ್ತೇನು?
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಗೆ ಪತ್ರ ಬರೆದಿರುವ ಆರ್‌ಸಿಬಿ ಫ್ರಾಂಚೈಸಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಚಲನಾವಲನವನ್ನು ಮೇಲ್ವಿಚಾರಣೆ ಮಾಡಲು, ಸರತಿ ಸಾಲು ವ್ಯವಸ್ಥೆಗಳನ್ನು ನಿಯಂತ್ರಿಸಲು ಮತ್ತು ಪ್ರವೇಶ ಮತ್ತು ನಿರ್ಗಮನ ದ್ವಾರದ ರಿಯಲ್ ಟೈಮ್ ಟ್ರ್ಯಾಕಿಂಗ್ ಮೂಲಕ ಅನಧಿಕೃತ ಪ್ರವೇಶವನ್ನು ತಡೆಯಲು ಸುಧಾರಿತ ಕಣ್ಗಾವಲು ತಂತ್ರಜ್ಞಾನವನ್ನು ನಿಯೋಜಿಸುವ ಯೋಜನೆಯನ್ನು ಕೆಎಸ್ಸಿಎಗೆ ಆರ್‌ಸಿಬಿ ವಿವರಿಸಿದೆ
ಈ ಒಂದು ಕ್ರಮವು ಪಂದ್ಯ ನಡೆಯುವ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಆರ್‌ಸಿಬಿ ಹೇಳಿದೆ. ವಿಶೇಷವಾಗಿ ಐಪಿಎಲ್ ಪಂದ್ಯಗಳು ಮತ್ತು ಇತರ ಪ್ರಮುಖ ಕಾರ್ಯಕ್ರಮಗಳ ಸಮಯದಲ್ಲಿ ಹೆಚ್ಚಿನ ಜನ ದಟ್ಟಣೆ ಸೇರಿದಾಗ ಯಾವುದೇ ಅನಾಹುತ ಸಂಭವಿಸಬಾರದು ಅನ್ನೋದು ಆರ್ಸಿಬಿಯ ಆಶಯವಾಗಿದೆ.