High court 
ರಾಜ್ಯ

ತೃತೀಯ ಭಾಷೆಗೆ ಅಂಕ ಪ್ರಶ್ನಿಸಿ ಸರ್ಕಾರದಿಂದ ಅರ್ಜಿ| High court

ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಲಿ ಪರೀಕ್ಷೆಯಲ್ಲಿ ಹಿಂದಿ ಸೇರಿ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್​ ಬದಲಿಗೆ ಅಂಕಗಳನ್ನು ನೀಡುವಂತೆ ನೀಡಿರುವ ನಿರ್ದೇಶನವನ್ನು ಮರುಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ. ಅರ್ಜಿಯನ್ನು ತುರ್ತು ವಿಚಾರಣೆಗೆ ಕೋರುವ ಸಾಧ್ಯತೆಯಿದೆ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿಯಮಗಳಿಗೆ ತಿದ್ದುಪಡಿ ತರಲು ಕರಡು ಅಧಿಸೂಚನೆಯನ್ನು ಏ.10ರಂದೇ ರಾಜ್ಯ ಸರ್ಕಾರ ತನ್ನ ವಿಶೇಷ ಗೆಜೆಟ್​ನಲ್ಲಿ ಪ್ರಕಟಿಸಿದೆ. ಇದನ್ನು ನ್ಯಾಯಾಲಯದ ಗಮನಕ್ಕೆ ತರದೆ ಅರ್ಜಿದಾರರು ಆದೇಶ ಪಡೆದಿದ್ದಾರೆ. ಅಲ್ಲದೆ ಈ ವಿಷಯಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಪಿಐಎಲ್​ ವಜಾಗೊಳಿಸಿರುವ ವಿಭಾಗೀಯ ನ್ಯಾಯಪೀಠ, ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದೆ. ಸತ್ಯಾಂಶ ಮರೆಮಾಚಿ ಅರ್ಜಿದಾರರು ಮನವಿ ಸಲ್ಲಿಸಿದ್ದರು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ತನ್ನ ಆಕ್ಷೇಪಣೆಗಳನ್ನು ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ ಸಿಕ್ಕಿಲ್ಲ. ಅಂಕದ ಬದಲು ಗ್ರೇಡ್​ ನೀಡುವುದು ಸುಧಾರಣಾ ಕ್ರಮವಾಗಿದೆ. ಇದು ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ. ತೃತೀಯ ಭಾಷೆಯನ್ನು ಕಡೆಗಣಿಸಲಾಗಿಲ್ಲ. ಆದ್ದರಿಂದ ಏ.15ರಂದು ಹೊರಡಿಸಿರುವ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.