DGP Ramachandra Rao 
ರಾಜ್ಯ

'ರಾಸಲೀಲೆ' ವಿಡಿಯೋ ವೈರಲ್ : ಡಿಜಿಪಿ ರಾಮಚಂದ್ರ ರಾವ್ ಅಮಾನತಿಗೆ ರಾಜ್ಯ ಸರ್ಕಾರ ಆದೇಶ! | DGP Ramachandra Rao

ಬೆಂಗಳೂರು: ಕರ್ನಾಟಕದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (DCRE) ಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ಮಂಗಳವಾರ(ಜ.20) ಅಮಾನತುಗೊಳಿಸಿದೆ.
ಸೋಮವಾರ (ಜನವರಿ 19) ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲಿ ಮಹಿಳೆಯರೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಘಟನೆಯ ಹಿನ್ನೆಲೆ

ಸುಮಾರು 47 ಸೆಕೆಂಡುಗಳ ಅವಧಿಯ ಈ ವಿಡಿಯೋ ಕ್ಲಿಪ್‌ನಲ್ಲಿ, ಸಮವಸ್ತ್ರಧಾರಿ ಅಧಿಕಾರಿಯೊಬ್ಬರು (ಡಾ.ರಾಮಚಂದ್ರರಾವ್​ ಎನ್ನಲಾಗಿದೆ) ತಮ್ಮ ಕಚೇರಿಯ ಚೇಂಬರ್‌ನಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಹಳೆಯ ಸಂಗ್ರಹಗಳ ಸರಣಿಯಂತೆ ಕಾಣುತ್ತಿದ್ದು, ಕಚೇರಿಯ ಕೆಲಸದ ವೇಳೆಯಲ್ಲೇ ಇಂತಹ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇದು ಇಡೀ ಪೊಲೀಸ್ ಇಲಾಖೆಗೆ ಮುಜುಗರ ತಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಸಿಎಂ ಸಿದ್ದರಾಮಯ್ಯ ಖಡಕ್ ಪ್ರತಿಕ್ರಿಯೆ!

ಈ ವಿಷಯವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬರುತ್ತಿದ್ದಂತೆಯೇ, ಅವರು ತಕ್ಷಣವೇ ತನಿಖೆಗೆ ಆದೇಶಿಸಿದರು. "ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅಧಿಕಾರಿ ಎಷ್ಟೇ ಹಿರಿಯವರಾಗಿದ್ದರೂ ಶಿಸ್ತು ಕ್ರಮ ಅನಿವಾರ್ಯ. ಈ ಘಟನೆಯ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ," ಎಂದು ಸಿಎಂ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಅವರನ್ನು ಅಮಾನತುಗೊಳಿ ಆದೇಶ ಹೊರಡಿಸಲಾಗಿದೆ.

ಅಧಿಕಾರಿಯ ಸಮರ್ಥನೆ

ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿರುವ ರಾಮಚಂದ್ರ ರಾವ್, ಈ ವಿಡಿಯೋಗಳು ಸಂಪೂರ್ಣವಾಗಿ ಸುಳ್ಳು ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ 'ಫ್ಯಾಬ್ರಿಕೇಟೆಡ್' ವಿಡಿಯೋಗಳಾಗಿವೆ ಎಂದು ಹೇಳಿದ್ದಾರೆ. "ಇದು ನನ್ನ ತೇಜೋವಧೆ ಮಾಡುವ ಸಂಚು. ನಾನು 8 ವರ್ಷಗಳ ಹಿಂದೆ ಬೆಳಗಾವಿಯಲ್ಲಿದ್ದಾಗ ನಡೆದ ಸಂಗತಿಗಳನ್ನು ಈಗ ತಿರುಚಿ ಬಿತ್ತರಿಸಲಾಗುತ್ತಿದೆ," ಎಂದು ಅವರು ವಾದಿಸಿದ್ದಾರೆ. ಈ ಕುರಿತು ಅವರು ಗೃಹ ಸಚಿವರನ್ನು ಭೇಟಿ ಮಾಡಲು ಯತ್ನಿಸಿದರೂ, ಸಚಿವರು ಭೇಟಿಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಹಳೆಯ ವಿವಾದಗಳ ನಂಟು

ರಾಮಚಂದ್ರ ರಾವ್ ಈ ಹಿಂದೆಯೂ ಸುದ್ದಿಯಲ್ಲಿದ್ದರು. ಇವರ ಪುತ್ರಿ (ಸಾಕು ಮಗಳು) ಕನ್ನಡ ನಟಿ ರಣ್ಯ ರಾವ್ 2025 ರಲ್ಲಿ ದುಬೈನಿಂದ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದರು. ಆ ಸಮಯದಲ್ಲಿಯೂ ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ತನಿಖೆ ನಡೆಸಲಾಗಿತ್ತು. ನಂತರ ಅವರಿಗೆ ಕ್ಲೀನ್ ಚಿಟ್ ನೀಡಿ ಡಿಜಿಪಿ ಹುದ್ದೆಗೆ ಮರುಸ್ಥಾಪಿಸಲಾಗಿತ್ತು. ಇದೀಗ ಹೊಸದಾಗಿ ಈ 'ರಾಸಲೀಲೆ' ವಿಡಿಯೋ ವೈರಲ್ ಆಗಿರುವುದು ಅವರ ವೃತ್ತಿಜೀವನಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಸದ್ಯ ಅವರು 10 ದಿನಗಳ ರಜೆ ಹಾಕಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.