ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು. ಸುಭಾಸ ಪಾಟೀಲ, ಜಗದೀಶ ಬೂದಿಹಾಳ, ಯುವರಾಜ ಜಾಧವ, ಸುಭಾಷ ತುರಮುರಿ ಇತರರಿದ್ದರು. 
ರಾಜ್ಯ

ರೈತರಿಗೆ ರಾಜ್ಯ ಸರ್ಕಾರ ಅನ್ಯಾಯ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಜಿಲ್ಲೆಯಯಲ್ಲಿ ಮಳೆ ಕೊರತೆಯಿಂದ ಸಂಕಷ್ಟಕ್ಕೀಡಾಗಿರುವ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಸೋಮವಾರ ಬಿಜೆಪಿ ಗ್ರಾಮೀಣ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ಗೆ ಮನವಿ ಸಲ್ಲಿಸಿದರು.
ಪ್ರಸಕ್ತ ಸಾಲಿನಲ್ಲಿ ಮುಂಗಾರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಿರುವ ಕಾರಣ ಹಲವೆಡೆ ಬಿತ್ತನೆ ಮಾಡಿರುವ ಬೆಳೆಗಳು ಸಂಪೂರ್ಣ ಒಣಗಿ ಹಾನಿಯಾಗಿದ್ದರೆ, ಕೆಲವೆಡೆ ಬಿತ್ತನೆ ಕೂಡ ಆಗಿಲ್ಲ. ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿರುವ ಬೆಳಗಾವಿ ಜಿಲ್ಲೆಯ ಬಹುತೇಕ ತಾಲೂಕುಗಳನ್ನು ಕೈಬಿಟ್ಟಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಸರ್ಕಾರ ಬರಪಟ್ಟಿಯನ್ನು ಮರುಪರಿಶೀಲಿಸಿ ಹೊಸ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ತಂಡ ಪ್ರವಾಸ ಕೈಗೊಂಡಾಗ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದನ್ನು ಗುರುತಿಸಿಸಿದ್ದು, ಇಡೀ ಬೆಳಗಾವಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸುವಂತೆ ಬಿಜೆಪಿ ನಿಯೋಗ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ, ಸರ್ಕಾರ ಬಿಡುಗಡೆ ಮಾಡಿದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ಯಾವುದೇ ತಾಲೂಕಿನ ಹೆಸರು ಸೇರ್ಪಡೆಯಾಗಿಲ್ಲ. ಈ ಮೂಲಕ ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ರೈತರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ ಬೂದಿಹಾಳ, ಯುವರಾಜ ಜಾಧವ, ಸುಭಾಷ ತುರಮರಿ, ಶ್ರೀಕರ ಕುಲಕರ್ಣಿ, ಉಮೇಶ ಪುರಿ, ಸಂತೋಷ ಹಡಪದ, ಪ್ರಮೋದ ನುಗ್ಗಾನಟ್ಟಿ, ಲಕ್ಕಪ್ಪ ಕಾರಗಿ, ಶ್ವೇತಾ ಜಗದಾಳೆ ಇತರರಿದ್ದರು.