ಜಲ ಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ 
ರಾಜ್ಯ

ಜೆಜೆಎಂ ಅನುದಾನ ಪಡೆಯುವಲ್ಲಿ ರಾಜ್ಯ ಸರ್ಕಾರ ವಿಫಲ

ಬೆಂಗಳೂರು: ಜಲ ಜೀವನ ಮಿಷನ್ ಯೋಜನೆ ನಿಧಾನಗತಿಯ ಕಾಮಗಾರಿಗಳು ಮತ್ತು ಸಕಾಲಕ್ಕೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಿದ್ದ ದಾಖಲೆ ಕೊರತೆಯಿಂದಾಗಿ ರಾಜ್ಯ ಸರ್ಕಾರ 16,863 ಕೋಟಿ ರೂ. ಅನುದಾನ ಪಡೆಯುವಲ್ಲಿ ವಿಫಲವಾಗಿದೆ.
ಜಲ ಜೀವನ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಆರೋಪಗಳನ್ನು ಅಲ್ಲಗಳೆದಿದ್ದಾರೆ.
2019 ರಿಂದ 2024ರ ವರೆಗಿನ 5 ವರ್ಷಗಳು ಈ ಯೋಜನೆಯ ಕಾರ್ಯಾವಧಿಯಾಗಿತ್ತು. ಈ ಯೋಜನಾ ಅವಧಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 28,623 ಕೋಟಿ ರೂ. ಅನುದಾನ ಹಂಚಿಕೆ ಮಾಡಿತ್ತು. ಆದರೆ, ನಿಧಾನಗತಿಯ ಕಾಮಗಾರಿಗಳು ಮತ್ತು ಸಕಾಲಕ್ಕೆ ಕೇಂದ್ರಕ್ಕೆ ಸಲ್ಲಿಸಬೇಕಿದ್ದ ದಾಖಲೆಯ ಕೊರತೆಯಿಂದಾಗಿ ರಾಜ್ಯ ಸರ್ಕಾರ ಕೇವಲ 11,152 ಕೋಟಿ ರೂ. ಅನುದಾನ ಮಾತ್ರ ಬಳಸಿಕೊಂಡಿದೆ. ಉಳಿದ 16,863 ಕೋಟಿ ಅನುದಾನವನ್ನು ಪಡೆಯುವಲ್ಲಿ ವಿಫಲವಾಗಿದೆ.
ಯೋಜನಾ ಅವಧಿಯಲ್ಲಿ 66,344 ಯೋಜನೆಗಳ ಪೈಕಿ ಭೌತಿಕವಾಗಿ ಕೇವಲ 24,888 ಯೋಜನೆಗಳು ಪ್ರಗತಿಯಲ್ಲಿದ್ದು, ಸಾಧನೆ ಶೇ35.50 ಇದೆ. ಆರ್ಥಿಕವಾಗಿ ಕೇವಲ 9,325 ಯೋಜನೆ ಮುಗಿದಿದ್ದು, ಸಾಧನೆ ಶೇ.14.05 ರಷ್ಟಿದೆ. ಜೆಜೆಎಂ ಪ್ರಗತಿಯಲ್ಲಿ ದೇಶದಲ್ಲಿ ಕರ್ನಾಟಕ 22ನೇ ಸ್ಥಾನದಲ್ಲಿದೆ. 2019ರಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಇದ್ದ ನೀರಿನ ಸಂಪರ್ಕ ಶೇ.24.2 ಇದೆ. ಪ್ರಸ್ತುತ ಇದು ಶೇ.86.93 ಗಮನಾರ್ಹ ಸಾಧನೆ ಕಂಡಿದೆ. ಜಲ ಜೀವನ ಮೀಷನ್ ಯೋಜನೆಯಡಿ ನೀಡಲಾದ ನೂತನ ಸಂಪರ್ಕ 63.5 ಲಕ್ಷ. ಹರ್ ಜಲ್ ಸರ್ಟಿಫಿಕೇಷನ್ ಅತೀ ಕಡಿಮೆ ಇದೆ. 26,591 ಹಳ್ಳಿಗಳ ಪೈಕಿ ಕೇವಲ 6989 ಹಳ್ಳಿಗಳು ಮಾತ್ರ ಹರ್ ಘರ್ ಜಲ್ ಸರ್ಟಿಫಿಕೇಷನ್ ಪಡೆದಿದೆ. ಕರ್ನಾಟಕದ ಯಾವುದೇ ಜಿಲ್ಲೆ ಪೂರ್ಣ ಪ್ರಮಾಣದಲ್ಲಿ ಸರ್ಟಿಫಿಕೇಷನ್ ಪಡೆದಿರುವುದಿಲ್ಲ ಎಂದು ವಿ. ಸೋಮಣ್ಣ ಆರೋಪಿಸಿದ್ದಾರೆ.

26 ಯೋಜನೆಗಳಿಗೆ ವರ್ಕ್ ಆರ್ಡರ್ ಇಲ್ಲ :

ರಾಜ್ಯ ಪ್ರಸ್ತಾಪಿಸಿದ 66,344 ಯೋಜನೆಗಳ ಪೈಕಿ 1,716 ಕೋಟಿ ರೂ. ವೆಚ್ಚದ 26 ಯೋಜನೆಗಳಿಗೆ 2024ರ ಮಾರ್ಚ್ 15ರ ವರೆಗೆ ವರ್ಕ್ ಆರ್ಡರ್ ಸಹ ನೀಡದಿರುವುದು ರಾಜ್ಯ ಸರ್ಕಾರದ ವಿಲತೆಯನ್ನು ಎತ್ತಿ ತೋರುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಜೆಜೆಎಂ ಯೋಜನೆ ಮುಗಿದ 2024ರ ಮಾರ್ಚ್ ನಿಂದ 2026ರ ಮಾರ್ಚ್ ವರೆಗೆ ಕೇವಲ ಕರ್ನಾಟಕವಲ್ಲದೆ, ಉತ್ತರ ಪ್ರದೇಶ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ ನಂತಹ ರಾಜ್ಯಕ್ಕೂ ಹಣ ಬಿಡುಗಡೆಯಾಗಿಲ್ಲ.